ಶ್ರೀ ಸುತ್ತೂರು ಶ್ರೀಮಠದ ಪರಂಪರೆ2019-07-01T17:52:29+00:00

ಶ್ರೀ ಸುತ್ತೂರು ಶ್ರೀಮಠದ ಪರಂಪರೆ

ಕರ್ನಾಟಕದ ಸಾಂಸ್ಕತಿಕ ಹಾಗೂ ಧಾಮೀಕ ಇತಿಹಾಸದಲ್ಲಿ ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಪ್ರಾಚೀನತೆ ಒಂದು ಸಾವಿರ ವರ್ಷಗಳಷ್ಟು ಹಳೆಯದು. ಕ್ರಿ.ಶ. ಹತ್ತನೆಯ ಶತಮಾನದಲ್ಲಿ ಸಿದ್ಧಗಿರಿಯಲ್ಲಿ ಸುದೀರ್ಘ ತಪಗೈದಿದ್ದ ಶ್ರೀ ಶಿವರಾತ್ರೀಶ್ವರರು ಅಲ್ಲಿಂದ ದಕ್ಷಿಣಕ್ಕೆ ಬಂದು ಸುತ್ತೂರಿನಲ್ಲಿ ತಪೋನಿರತರಾದರು. ಆಗ ತಲಕಾಡು ಪ್ರಾಂತ್ಯವನ್ನಾಳುತ್ತಿದ್ದ ಗಂಗರ ಮೇಲೆ ಚೋಳ ಚಕ್ರವರ್ತಿ ರಾಜೇಂದ್ರ ಚೋಳನು ಯುದ್ಧಾsಸಕ್ತನಾಗಿ ದಂಡೆತ್ತಿ ಬಂದನು. ಅವನ ಸೈನ್ಯ ಕಪಿಲಾನದಿ ತೀರಕ್ಕೆ ಬಂದಾಗ ಚಕ್ರವರ್ತಿಗೆ ಶ್ರೀ ಶಿವರಾತ್ರೀಶ್ವರರ ದರ್ಶನವಾಯಿತು. ಪೂಜ್ಯರು ಆತನಿಗೆ ಯುದ್ಧದ ನಿರರ್ಥಕತೆಯನ್ನು ಅದರಿಂದುಂಟಾಗುವ ವಿಪತ್ತುಗಳನ್ನು ವಿವರಿಸಿದರು. ಇದರಿಂದ ಮನಃಪರಿವರ್ತಿತನಾದ ಚರ್ಕವರ್ತಿಯು ಯುದ್ಧವನ್ನು ಕೈಬಿಟ್ಟು ಗಂಗರೊಡನೆ ಸಂಧಾನ ಮಾಡಿಕೊಂಡನು. ಶ್ರೀ ಶಿವರಾತ್ರೀಶ್ವರರ ಮೇಲಿನ ಭಕ್ತಿ ಹಾಗೂ ಶ್ರದ್ಧೆಯಿಂದ ಇಲ್ಲೇ ನೆಲೆಸಬೇಕೆಂದು ಪ್ರಾರ್ಥಿಸಿದನು. ಅದರಂತೆ ಪೂಜ್ಯರು ಶ್ರೀಮಠವನ್ನು ಸಂಸ್ಥಾಪಿಸಿ, ಕನ್ನಡ ನಾಡಿನ ಆಧ್ಯಾತ್ಮಿಕ, ಧಾರ್ಮಿಕ, ಸಾಂಸ್ಕøತಿಕ ಚರಿತ್ರೆಗೆ ಭದ್ರ ಬುನಾದಿಯನ್ನು ಹಾಕಿದರು.

22ನೆಯ ಜಗದ್ಗುರು ಶ್ರೀ ಶಿವರಾತ್ರೀಶ್ವರರ ಕಾಲಕ್ಕೆ ಶ್ರೀಮಠದ ಕಾರ್ಯವ್ಯಾಪ್ತಿ ಹೆಚ್ಚುಹೆಚ್ಚಾಗಿ ಸಮಾಜಮುಖಿಯಾಗತೊಡಗಿತು. ಈ ಗುರುಪರಂಪರೆಯ ತಪಸ್ಸು, ತೇಜಸ್ಸು, ಚೈತನ್ಯ, ಕ್ರಿಯಾಶೀಲತೆ, ಕಾರ್ಯತತ್ಪರತೆಗಳೆಲ್ಲ ಏಕತ್ರಗೊಂಡು ಮೂರ್ತಿವೆತ್ತಂಥವರು.

ಶ್ರೀಮಠದ 23ನೆಯ ಜಗದ್ಗುರುಗಳಾದ ಡಾ|| ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು

ಶ್ರೀಕ್ಷೇತ್ರದ ಶರಣ ದಂಪತಿಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಮರಮ್ಮಣ್ಣಿಯವರು ಪೂಜ್ಯ ರಾಜೇಂದ್ರ ಶ್ರೀಗಳವರ ಪೂರ್ವಾಶ್ರಮದ ಮತಾಪಿತೃಗಳು. 29.8.1916ರಂದು ಜನಿಸಿದ ಪೂಜ್ಯರು ಸುತ್ತೂರಿನಲ್ಲಿಯೇ ಬಾಲ್ಯ ವಿದ್ಯಾಭ್ಯಾಸವನ್ನು ಪೂರೈಸಿದರು. ಪೂರ್ವಾಶ್ರಮದ ನಾಮಧೇಯ ಶ್ರೀ ಪುಟ್ಟಸ್ವಾಮಿಗೆ ಶ್ರೀ ಶಿವರಾತ್ರಿಶ್ವರರು ತಮ್ಮ ಕರಕಮಲ ಸಂಜಾತರನ್ನಾಗಿಸಿಕೊಂಡು ಶ್ರೀ ಶಿವರಾತ್ರಿ ರಾಜೇಂದ್ರಸ್ವಾಮಿ ಎಂದು ಅಧಿಕೃತ ನಾಮಕರಣ ಮಾಡಿದರು. ಪೂಜ್ಯರಿಗೆ 8 ವರ್ಷ ವಯಸ್ಸಾದಾಗಲೇ ಮೈಸೂರಿನಲ್ಲಿ ಶ್ರೇಷ್ಠ ಸಂಸ್ಕತ ಪಂಡಿತರಾದ ಬಸವರಾಜ ಶಾಸ್ತ್ರಿಗಳಿಂದ ಸಂಸ್ಕøತಾಭ್ಯಾಸವಾಯಿತು. ಆ ಅವಧಿಯಲ್ಲಿ ಪಂಡಿತ ಸೋಮಶೇಖರಸ್ವಾಮಿಗಳೊಡನೆ ಆಧ್ಯಾತ್ಮಿಕ ಸಮಾಲೋಚನೆಯಲ್ಲಿ ತೊಡಗುತ್ತಿದ್ದ ಶ್ರೀಗಳವರು ಅರಮನೆ ಪಂಚಗವಿ ಮಠದ ಶ್ರೀ ಗೌರೀಶಂಕರಸ್ವಾಮಿಗಳವರ ಬಗ್ಗೆ ಸಾಕಷ್ಟು ಕೇಳಿ ತಿಳಿದುಮ ಕುತೂಹಲಗೊಂಡರು. ಶ್ರೀ ಗೌರಿಶಂಕರಸ್ವಾಮಿಗಳವರು ಕಾಶಿಯಲ್ಲಿದ್ದು, ಸಂಸ್ಕತ, ಸಾಹಿತ್ಯ, ಅಲಂಕಾರ, ವ್ಯಾಕರಣ, ಪಾಲಿ, ಪ್ರಾಕೃತ, ಫ್ರೆಂಚ್, ಇಂಗ್ಲೀಷ್, ಇತಿಹಾಸ, ಮನಃಶಾಸ್ತ್ರದಲ್ಲಿ ಉದ್ಧಾಮ ಪಂಡಿತರೆಂದು ಖ್ಯಾತಿ ಪಡೆದಿದ್ದರು.

ಅವರ ಸಾನ್ನಿಧ್ಯದಲ್ಲಿ ವ್ಯಾಸಂಗ ಮಾಡಬೇಕೆಂಬ ಹಂಬಲದಿಂದ ಕಾಶಿಗೆ ಹೋಗಿ ಶ್ರೀ ಗೌರೀಶಂಕರಸ್ವಾಮಿಗಳವರ ಭೇಟಿ ಮಾಡಿದರು. ಅವರು ‘ನೀವೊಬ್ಬರೇ ವಿದ್ಯಾವಂತರಾದರೆ ಸಾಲದು, ನೀವು ಹಿಂದಿರುಗಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ಆಸರೆಯಾಗಿ’ ಎಂದರು. ರಾಜೇಂದ್ರ ಶ್ರೀಗಳವರನ್ನು ಮೈಸೂರಿನಲ್ಲಿ ಕಾಣದೆ ಕಾಶಿಯಲ್ಲಿರಬಹುದೆಂದು ಅಂದಾಜಿಸಿದ ಶ್ರೀ ಶಿವರಾತ್ರಿಶ್ವರರು ರಾಜೇಂದ್ರ ಶ್ರೀಗಳನ್ನರಸಿ ಕಾಶಿಗೆ ತೆರಳಿ ಶ್ರೀಗಳನ್ನು ಮೈಸೂರಿಗೆ ಕರೆತಂದರು. 24.2.1928ರಲ್ಲಿ ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳವರಿಗೆ ಹನ್ನೆರಡು ವರ್ಷ ವಯಸ್ಸಾಗಿದ್ದಾಗಲೇ ಶ್ರೀಮಠದ ಅಧಿಕಾರವನ್ನು ವಹಿಸಿಕೊಡಲಾಯಿತು.

ಶ್ರೀಮಠದ ಹೊಣೆಗಾರಿಕೆಯನ್ನು ವಹಿಸಿಕೊಂಡ ಮೇಲೆ ಸಮಾಜ ಸೇವೆಯ ಕಾಯಕ, ಬಿಡುವಿಲ್ಲದ ಚಿಂತನೆಯಲ್ಲಿ ತೊಡಗಿದರು. ಬಡತನದ ಕಾರಣದಿಂದ ವಿದ್ಯಾಭ್ಯಾಸವನ್ನು ಮುಂದುವರೆಸಲು ಸಾಧ್ಯವಾಗದೆ ಇರುವ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂಬ ಉದ್ದೇಶದಿಂದ ಉಚಿತ ಪ್ರಸಾದನಿಲಯವನ್ನು ಶ್ರೀಗಳು 1936ರಷ್ಟರಲ್ಲೇ ಪ್ರಾರಂಭಿಸಿದರು. ಹಿರಿಯ ಶ್ರೀಗಳವರ ಉತ್ತೇಜನದಿಂದ ಪ್ರಥಮತಃ ವಾಣೀವಿಲಾಸ ರಸ್ತೆಯಲ್ಲಿದ್ದ ಕಟ್ಟಡವೊಂದನ್ನು ಖರೀದಿಸಿ ಉಚಿತ ವಿದ್ಯಾರ್ಥಿನಿಲಯ ಪ್ರಾರಂಭಿಸಿದರು. ಅಂದಿನ ಪ್ರಾರಂಭ ವಿದ್ಯಾರ್ಥಿನಿಲಯಗಳ ಅಂಕುರಾರ್ಪಣ.

40ರ ದಶಕದಲ್ಲಿ ಪ್ರಾರಂಭಿಸಲಾದ ವಿದ್ಯಾರ್ಥಿನಿಲಯದಲ್ಲಿ ಅಭ್ಯಾಸ ಮಾಡಿದ ಗಣ್ಯರೆಂದರೆ ಶ್ರೀ ಎಂ. ರಾಜಶೇಖರಮೂರ್ತಿ, ಶ್ರೀ ಎಂ.ಎಸ್. ಗುರುಪಾದಸ್ವಾಮಿ, ಶ್ರೀ ಹೆಚ್. ವೀರಭದ್ರಯ್ಯ, ಶ್ರೀ ಎಂ.ಎಸ್. ಪರಶಿವಮೂರ್ತಿ ಹಾಗೂ ಇತರರು. ಆನಂತರದ ದಶಕಗಳಲ್ಲಿ ಡಾ. ಡಿ.ಎಂ. ನಂಜುಂಡಪ್ಪ, ಪ್ರೊ. ಜಿ.ಎಸ್. ಶಿವರುದ್ರಪ್ಪ, ಡಾ. ಯು.ಆರ್. ಅನಂತಮೂರ್ತಿ ಮುಂತಾದವರು ನಿಲಯದ ವಿದ್ಯಾರ್ಥಿಗಳಾಗಿದ್ದರು. 1945ರಲ್ಲಿ ಚಾಮರಾಜನಗರದಲ್ಲಿ, 1948ರಲ್ಲಿ ಮೈಸೂರಿನಲ್ಲಿ ‘ಗೌರೀಶಂಕರ ನಿಲಯ’ವೆಂಬ ಉಚಿತ ವಿದ್ಯಾರ್ಥಿನಿಲಯ ಪ್ರಾರಂಭವಾದುವು. ಹೀಗೆ ಸಾವಿರಾರು ಮಕ್ಕಳಿಗೆ ಅಶನ-ವಸನ ನೀಡಿದ ವಿದ್ಯಾರ್ಥಿನಿಲಯಗಳ ಸಂಖ್ಯೆ ಇಂದು ಬೃಹದಾಕಾರವಾಗಿ ಬೆಳೆದು ಸಾವಿರಾರು ವಿದ್ಯಾರ್ಥಿಗಳ ವಿದ್ಯಾದಾನಕ್ಕೆ ನೆರವಾಗಿದೆ.

ಬಹು ದೊಡ್ಡ ಧಾರ್ಮಿಕ ಪರಂಪರೆಯ ಉತ್ತರಾಧಿಕಾರಿಯಾಗಿ ಬಂದ ರಾಜೇಂದ್ರ ಶ್ರೀಗಳವರು ತಮ್ಮನ್ನು ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳದೆ, ಸುತ್ತಲ ಸಮಾಜದ ಅಸಮಾನತೆ, ಬಡತನ, ಹತಾಶೆಗಳನ್ನು ಕಂಡು ಮಮ್ಮಲ ಮರುಗಿದವರು. ಪೀಠದ ಸೇವಾಕಾರ್ಯಗಳನ್ನು ಸಮಾಜವಲಯಕ್ಕೆ ಸಮರ್ಥವಾಗಿ ವಿಸ್ತಿರಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬರುವ ಮುನ್ನವೇ ಪೂಜ್ಯರು ಜನಸಮುದಾಯದ ಸಮಸ್ಯೆಗಳಿಗೆ ಅವಿದ್ಯೆಯೇ ಕಾರಣವೆಂದು ಮನಗಂಡು, ವಿದ್ಯಾಪ್ರಸಾರಕ್ಕಾಗಿ 1954ರಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠವನ್ನು ಸಂಸ್ಥಾಪಿಸಿದರು. ಅದರ ಆಶ್ರಯದಲ್ಲಿ ಅಕ್ಷರದಾಸೋಹಕ್ಕಾಗಿ ಶಾಲಾಕಾಲೇಜುಗಳನ್ನು ಅನ್ನದಾಸೋಹಕ್ಕಾಗಿ ವಸತಿನಿಲಯಗಳನ್ನು, ಆರೋಗ್ಯಸೇವೆಗಾಗಿ ಆಸ್ಪತ್ರೆಗಳನ್ನು ತೆರೆದು ಸಮಾಜದ ಅಭಿವೃದ್ಧಿಗೆ ಕಾರಣೀಭೂತರಾದರು. ದೀನದಲಿತರ ಕುರಿತು ಅಪಾರ ಅನುಕಂಪ ಹೊಂದಿದ್ದ ಪೂಜ್ಯರು, ಸಹಸ್ರಾರು ಅವಕಾಶವಂಚಿತರಿಗೆ ಆಶ್ರಯ ನೀಡಿದರು.

ವಚನ ಚಳವಳಿಯ ಆಶಯ ಮತ್ತು ಧೋರಣೆಗಳನ್ನು ಇಂದಿನ ಜನಮಾನಸದಲ್ಲಿ ಸದಾ ಜಾಗೃತವಾಗಿಡುವ ಸಲುವಾಗಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಪೂಜ್ಯ ಶ್ರೀಗಳವರ ಅವಿಸ್ಮರಣಿಯ ಕೊಡುಗೆಗಳು ಸಾಹಿತ್ಯ ಧರ್ಮ, ದರ್ಶನ, ಶಿಕ್ಷಣ, ಕಲೆ ಕುರಿತ ಕೃತಿಗಳ ಪ್ರಕಟಣೆಗಾಗಿ ಶ್ರೀ ಶಿವರಾತ್ರೀಶ್ವರ ಗ್ರಂಥಮಾಲೆ ಹಾಗೂ ಶ್ರೀ ಶಿವರಾತ್ರೀಶ್ವರ ಧಾರ್ಮಿಕದತ್ತಿ, ಜೆಎಸ್‍ಎಸ್ ಸಂಗೀತ ಕಲಾಭಿವೃದ್ಧಿಗಾಗಿ ಜೆಎಸ್‍ಎಸ್ ಸಂಗೀತ ಸಭಾ ಹಾಗೂ ಜೆಎಸ್‍ಎಸ್ ಕಲಾಮಂಟಪ, ಗ್ರಾಮೀಣ ಪುರೋಭಿವೃದ್ಧಿಗಾಗಿ ಜೆಎಸ್‍ಎಸ್ ಗ್ರಾಮೀಣ ಪ್ರತಿಷ್ಠಾನ, ಯುವಜನರಿಗೆ ಕೈಗಾರಿಕಾ ತರಬೇತಿಗಾಗಿ ಜನಶಿಕ್ಷಣ ಸಂಸ್ಥೆ ಹಾಗೂ ಗ್ರಾಮಾಂತರ ಜನತೆಗೆ ಆರೋಗ್ಯ ಸೌಲಭ್ಯವನ್ನು ಒದಗಿಸುವ ಸಲುವಾಗಿ ಜೆಎಸ್‍ಎಸ್ ಮೆಡಿಕಲ್ ಟ್ರಸ್ಟ್ ಮುಂತಾದ ಸಂಸ್ಥೆಗಳನ್ನು ಪೂಜ್ಯ ಶ್ರೀಗಳವರು ಸ್ಥಾಪಿಸಿದರು. 1963ರಲ್ಲೇ ಸ್ಥಾಪಿಸಿಲಾದ ಈ ಆರೋಗ್ಯ ಕೇಂದ್ರ ಈಗ 1,800 ಹಾಸಿಗೆಗಳ ಬೃಹತ್ ಹಾಗೂ ಆಧುನಿಕ ಬಹುತಜ್ಞತೆಗಳ ಆಸ್ಪತ್ರೆಯಾಗಿ ರೂಪುಗೊಂಡಿದೆ. ಮಹಾವಿದ್ಯಾಪೀಠದ ಆಶ್ರಯದಲ್ಲಿ ಇಂದು ಮುನ್ನೂರಕ್ಕೂ ಹೆಚ್ಚು ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರಸ್ತುತ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಸಾವಿರಕ್ಕೂ ಹೆಚ್ಚಿನ ನೌಕರರು ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕದಲ್ಲಷ್ಟೇ ಅಲ್ಲದೆ ತಮಿಳುನಾಡು, ದೆಹಲಿ, ಉತ್ತರಪ್ರದೇಶ ಮುಂತಾದೆಡೆಗಳಲ್ಲಿ ಹಾಗೂ ಸಾಗರದಾಚೆಗೆ ದುಬೈ, ಮಾರಿಷಸ್ ಹಾಗೂ ಅಮೆರಿಕ ದೇಶಗಳಲ್ಲಿ ಶ್ರೀಮಠವು ತನ್ನ ಸೇವಾಕ್ಷೇತ್ರವನ್ನು ವಿಸ್ತರಿಸಿ ಸೇವೆ ಸಲ್ಲಿಸುತ್ತಿದೆ. ಸುತ್ತೂರು ಶ್ರೀಕ್ಷೇತ್ರದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ, ವಸತಿ, ಶಿಕ್ಷಣವನ್ನು ನೀಡಲಾಗುತ್ತಿದೆ. ಇಂದು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಸತ್ಸಂಕಲ್ಪ ಕರ್ತೃತ್ವಶಕ್ತಿ ತ್ಯಾಗ, ಔದಾರ್ಯ, ತಪಸ್ಸಿನ ಫಲವಾಗಿ ಜೆಎಸ್‍ಎಸ್ ಸಂಸ್ಥೆಯನ್ನು ಒಂದು ಮಹಾಸಂಸ್ಥೆಯನ್ನಾಗಿ ರೂಪಿಸಿದೆ.

ಶ್ರೀಗಳವರ ಸೇವೆಯನ್ನು ಕಂಡ ಅಂದಿನ ಮೈಸೂರು ಸಂಸ್ಥಾನದ ಶ್ರೀ ಜಯಚಾಮರಾಜೇಂದ್ರ ಒಡೆಯರ್‍ರವರು ಅವರಿಗೆ ರಾಜಗುರುತಿಲಕ ಎಂಬ ಬಿರುದನ್ನಿತ್ತು ಗೌರವಿಸಿದರು. ರಾಷ್ಟ್ರದ ಹೆಮ್ಮೆಯ ವಿದ್ಯಾಕೇಂದ್ರಗಳಲ್ಲೊಂದಾದ ಮೈಸೂರು ವಿಶ್ವವಿದ್ಯಾನಿಲಯವು ಪರಮಪೂಜ್ಯರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

srs_hm1