ಆಧ್ಯಾತ್ಮಿಕ ಆನಂದದ ನೆಲೆ

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಪಿಲಾ ನದಿಯ ದಂಡೆಯ ಮೇಲೆ ಪುಟ್ಟ ಗ್ರಾಮ ಸುತ್ತೂರು ನೆಲೆಗೊಂಡಿದೆ. ಮೈಸೂರಿನಿಂದ ದಕ್ಷಿಣಕ್ಕೆ 28 ಕಿಲೋಮೀಟರ್ (ವರುಣ ಗ್ರಾಮದ ಮೂಲಕ ರಾಜ್ಯ ಹೆದ್ದಾರಿಗೆ ಸಂಪರ್ಕ ಹೊಂದಿದೆ) ಮತ್ತು ಬೆಂಗಳೂರಿನಿಂದ ಸುಮಾರು 170 ಕಿಲೋಮೀಟರ್‍ಗಳ ದೂರದಲ್ಲಿದೆ. ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ ಗದ್ದಿಗೆ ಸುತ್ತೂರಿನ ಮುಖ್ಯ ದೇವಸ್ಥಾನ. ಪ್ರತಿ ಅಮಾವಾಸ್ಯೆಯಂದು ಸಾವಿರಾರು ಜನ ಭಕ್ತಾದಿಗಳು ಗದ್ದಿಗೆಗೆ ಭೇಟಿ ನೀಡುತ್ತಾರೆ.

ಸುತ್ತೂರು ಶ್ರೀಕ್ಷೇತ್ರ – ಹಿನ್ನೆಲೆ

ಕಳೆದ ಐದು ಸಾವಿರ ವರ್ಷಗಳಿಂದಲೂ ಭಾರತದ ಸಾಮೂಹಿಕ ಜೀವನವು ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳೊಂದಿಗೆ ನಿಕಟವಾಗಿ ತಳಕುಗೊಂಡಿದೆ. ಜೀವನದ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಮತ್ತು ಒಟ್ಟಾರೆ ಸಮಾಜದ ಪ್ರಗತಿಯಲ್ಲಿ ಧಾರ್ಮಿಕ ಮುಖಂಡರು ಮಾರ್ಗದರ್ಶಕ ಶಕ್ತಿಯಾಗಿದ್ದಾರೆ. ಖ್ಯಾತಿವೆತ್ತ ಸುತ್ತೂರು ಮಠವು ಈ ಶ್ರೀಮಂತ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಮತ್ತು ಇದಕ್ಕೆ ಸಾಕ್ಷಿಯಾಗಿದೆ.

ಶ್ರೀ ಜಗದ್ಗುರು ವೀರಸಿಂಹಾಸನ ಸುತ್ತೂರು ಮಹಾಸಂಸ್ಥಾನ ಮಠಕ್ಕೆ ಒಂದು ಸಾವಿರ ವರ್ಷಕ್ಕೂ ಮಿಗಿಲಾದ ಸುದೀರ್ಘ ಇತಿಹಾಸವಿದೆ. ಇದು ಬಹು ಆಯಾಮಗಳಿಂದ ಕೂಡಿದ ಸಂಸ್ಥೆಯಾಗಿದೆಯಲ್ಲದೆ ಸಾಮಾಜಿಕ ಜೀವನದ ಮುನ್ನಡೆಗೆ ಬಹು ದೊಡ್ಡ ಪ್ರಮಾಣದಲ್ಲಿ ಕೊಡುಗೆಯನ್ನು ನೀಡಿದೆ. ಮಠದ ಜನಪರ ಕಲ್ಯಾಣ ಚಟುವಟಿಕೆಗಳು ವೀರಶೈವ ಸಮುದಾಯದ ಎಲ್ಲೆಕಟ್ಟುಗಳನ್ನು ಮೀರಿವೆಯಲ್ಲದೆ ಭಾರತೀಯ ಸಮಾಜದ ಎಲ್ಲ ಪಂಗಡಗಳನ್ನು ಒಳಗೊಂಡಂತೆ ವ್ಯಾಪಕವಾಗಿ ಮತ್ತು ಸಂಪೂರ್ಣವಾಗಿ ಆವರಿಸಿವೆ.

ಕಾದಾಡುತ್ತಿದ್ದ ಎರಡು ರಾಜಮನೆತನಗಳ ನಡುವೆ ಶ್ರೀ ಶಿವರಾತ್ರೀಶ್ವರ ಶಿವಯೋಗಿ ಮಹಾಸ್ವಾಮಿಗಳವರು ಶಾಂತಿ ಸಂಧಾನಕ್ಕಾಗಿ ಯತ್ನಿಸಿದ ಚಾರಿತ್ರಿಕ ಘಟನೆಯೊಂದಿಗೆ ಮಠದ ಸ್ಥಾಪನೆಯನ್ನು ಗುರುತಿಸಬಹುದು. ತಲಕಾಡು ಗಂಗರ ದೊರೆ ನಾಲ್ಕನೆಯ ರಾಚಮಲ್ಲ ಮತ್ತು ಚೋಳರ ದೊರೆ ರಾಜರಾಜನ ನಡುವಣ ಹಗೆತನ ದೊಡ್ಡ ಪ್ರಮಾಣದ ಯುದ್ಧದಲ್ಲಿ ನಡೆಯುವುದರಲ್ಲಿತ್ತು. ಆದರೆ ಶ್ರೀ ಶಿವರಾತ್ರೀಶ್ವರ ಸ್ವಾಮಿಗಳವರ ಸಕಾಲಿಕ ಮಧ್ಯಪ್ರವೇಶದಿಂದಾಗಿ ಹಗೆತನ ಅಳಿದು ಶತ್ರುಗಳು ಮಿತ್ರರಾದರು. ಆಮೇಲೆ ರಾಜರಾಜನ ಪ್ರಾರ್ಥನೆಯ ಮೇರೆಗೆ ಮೈಸೂರಿನ ಬಳಿಯ ಸುತ್ತೂರಿನಲ್ಲಿ ಕಪಿಲಾ ನದಿಯ ದಡದ ಮೇಲೆ ಮಠವನ್ನು ಸ್ಥಾಪಿಸಲು ಸ್ವಾಮಿಗಳು ಅನುಗ್ರಹಿಸಿದರು.

ಚೋಳ ಚಕ್ರಾಧಿಪತ್ಯದ ಆಳ್ವಿಕೆಯಲ್ಲಿ ಸುತ್ತೂರು ಮಠ ಸ್ಥಾಪಿತವಾಯಿತು ಎಂಬುದನ್ನು ಶಾಸನಗಳು ಸ್ಥಿರಪಡಿಸುತ್ತವೆ. ಪಂಡಿತಾರಾಧ್ಯಚರಿತ, ಶಿವಾಚಾರ್ಯ ಚೂಡಾಮಣಿ ಮತ್ತು ಗಣಸಹಸ್ರನಾಮಗಳಂತಹ ಪ್ರಾಚೀನ ಗ್ರಂಥಗಳಲ್ಲಿ ಶಿವರಾತ್ರಿ ಶಿವಾಚಾರ್ಯರ ಹೆಸರು ಉಕ್ತವಾಗಿದೆ. ಸಂಪ್ರದಾಯವು ಒಬ್ಬ ಮಠಾಧೀಶರಿಂದ ಮತ್ತೊಬ್ಬರಿಗೆ ಅನೂಚಾನವಾಗಿ ನಡೆದು ಬಂದಿರುವುದನ್ನು ಗಮನಿಸಿದರೆ ಹಿಂದೆ ಪ್ರಸ್ತಾಪಿತರಾದ ಶ್ರೀ ಶಿವರಾತ್ರಿ ಶಿವಾಚಾರ್ಯರೇ ಸುತ್ತೂರು ಮಠದ ಸಂಸ್ಥಾಪಕರು.

ರಾಜೇಂದ್ರ ಚೋಳನ ಅವಧಿಯಲ್ಲಿ ಸುತ್ತೂರು ಮಠವು ಮತ್ತಷ್ಟು ಅಭಿವೃದ್ಧಿಯನ್ನು ಕಾಣುವುದಕ್ಕೆ ಕಾರಣರಾದವರು ಎರಡನೆಯ ಮಠಾಧಿಪತಿಗಳಾದ ಶ್ರೀ ಈಶಾನೇಶ್ವರ ಒಡೆಯರು. ಶ್ರೀ ಈಶಾನೇಶ್ವರ ಒಡೆಯರ ಬಯಕೆಯಂತೆ ಸುತ್ತೂರು ಮಠದ ಬಳಿಯಿರುವ ಶ್ರೀ ಸೋಮೇಶ್ವರ ದೇವಾಲಯವು ಚೋಳ ರಾಜರಿಂದ ನಿರ್ಮಾಣಗೊಂಡಿತು. ಈ ಘಟನೆಯನ್ನು ಉಲ್ಲೇಖಿಸುವ ಶಾಸನದ ಕಾಲ 23 ಅಕ್ಟೋಬರ್ 1032.

ಸುತ್ತೂರು ಮಠವು ಧಾರ್ಮಿಕ ಸಂಸ್ಥೆಯಾಗಿದ್ದು ಅದರ ಜನಪರ ಕಲ್ಯಾಣ ಚಟುವಟಿಕೆಗಳು ಸಮಾಜದ ಎಲ್ಲ ಪಂಗಡಗಳನ್ನೂ ಒಳಗೊಂಡು, ಪಂಥೀಯ ಎಲ್ಲೆಕಟ್ಟುಗಳನ್ನು ಮೀರಿವೆ.

JSS_rsw_2

ವಿಸ್ತಾರ ದಿಗಂತಗಳು

ಇಂದು ಸುತ್ತೂರು ಮಠವು ತಾನು ನಿರ್ಮಿಸಿರುವ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 15,000 ಕ್ಕೂ ಹೆಚ್ಚಿನ ನಿμÁ್ಠವಂತ ಕಾರ್ಯಕರ್ತರ ಸೇವೆಯನ್ನು ಹೊಂದಿದೆ. ಯಾವುದೇ ಸಂದರ್ಭದಲ್ಲೇ ಆಗಲಿ, ಇದರ ಶಿಕ್ಷಣ ಸಂಸ್ಥೆಗಳಲ್ಲಿ ಶಿಶುವಿಹಾರಗಳಿಂದ ಹಿಡಿದು
ಸ್ನಾತಕೋತ್ತರ ತಾಂತ್ರಿಕ ಮತ್ತು ವೈದ್ಯಕೀಯ ಸಂಸ್ಥೆಗಳಲ್ಲಿ 50,000 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿರುತ್ತಾರೆ. ಈ ಸಂಸ್ಥೆಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಹಬ್ಬಿವೆ. ಮಠವು ನಡೆಸುತ್ತಿರುವ ಆಸ್ಪತ್ರೆಗಳಲ್ಲಿ ಮತ್ತು ಚಿಕಿತ್ಸಾಲಯಗಳಲ್ಲಿ ಪ್ರತಿವರ್ಷ ಸುಮಾರು ಮೂರು ಲಕ್ಷ ಮಂದಿ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಶ್ರೀ ಮಠವು ಆಗಾಗ್ಗೆ ನಡೆಸುವ ಸಾಂಸ್ಕೃತಿಕ ಮಹೋತ್ಸವಗಳಲ್ಲಿ ಮತ್ತು ಆಧ್ಯಾತ್ಮಿಕ ಶಿಬಿರಗಳಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಾರೆ. ಲಭ್ಯವಿರುವ ಕೃಷಿ ಸಂಶೋಧನೆಗೆ ಸಂಬಂಧಿಸಿದ ಹಲವಾರು ಯೋಜನೆಗಳ ಮೂಲಕ ಈ ಪ್ರದೇಶದ ಸಾವಿರಾರು ಮಂದಿ ರೈತರು ಲಾಭ ಪಡೆದಿದ್ದಾರೆ.

ಶ್ರೀ ಸುತ್ತೂರು ವೀರಸಿಂಹಾಸನ ಮಠವು ಶತಮಾನಗಳಿಂದಲೂ ಬಹು ಆಯಾಮವುಳ್ಳ ಧಾರ್ಮಿಕ, ಸಾಂಸ್ಕೃತಿಕ ಮತು ಶೈಕ್ಷಣಿಕ ಚಳವಳಿಯಿಂದಾಗಿ ಇಂದಿನ ಮಟ್ಟಕ್ಕೆ ಬೆಳೆದು ನಿಂತಿದೆ. ಮಠದ ಶೈಕ್ಷಣಿಕ ಸಾಹಸಗಳ ಮುಂಚೂಣಿಯಾಗಿ 23ನೆಯ ಮಠಾಧೀಶರಾದ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರಿಂದ ಸ್ಥಾಪಿತವಾದ ಸಂಸ್ಥೆ ‘ಜಗದ್ಗುರು ಶ್ರೀ ಶಿವರಾತ್ರೀಶ್ವರ ಮಹಾವಿದ್ಯಾಪೀಠ.’

ಆಧ್ಯಾತ್ಮಿಕ ಮೌಲ್ಯಗಳ ಮತ್ತು ಆದರ್ಶಗಳ ಆಧಾರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ನ್ಯಾಯವನ್ನು ಎತ್ತಿ ಹಿಡಿಯಲು ಸಕ್ರಿಯವಾಗಿ ನಡೆಯುತ್ತಿರುವ ಚಳವಳಿಯೇ ಸುತ್ತೂರು ಮಠ.