ಶ್ರೀಗಳ ಅಮೃತವಾಣಿ

/ಶ್ರೀಗಳ ಅಮೃತವಾಣಿ
ಶ್ರೀಗಳ ಅಮೃತವಾಣಿ2019-07-01T17:52:29+00:00
ಸುಭಾಷಿತಗಳು
ಲೇಖನಗಳು
ಭಾಷಣಗಳು

ಪರಮಪೂಜ್ಯ ಜಗದ್ಗುರು ಡಾ. ಶ್ರೀ ರಾಜೇಂದ್ರ ಮಹಾಸ್ವಾಮಿಗಳು ಮೈಸೂರು ಆಕಾಶವಾಣಿಯಲ್ಲಿ ಪ್ರಸಾರ ಭಾಷಣ ಮಾಡಿದ ಸುಭಾಷಿತಗಳು

ಕೃತಜ್ಞತೆ

“ಉಪ್ಪುಕೊಟ್ಟವರನ್ನು ಮುಪ್ಪಿನವರೆಗೂ ನೆನೆಯಬೇಕು” ಎಂಬ ಗಾದೆಯ ಮಾತೊಂದಿದೆ. ಸಮಾಜ ಜೀವಿಗಳಾದ ಮಾನವರು ಪರಸ್ಪರ ಸಹಾಯ ಸಹಕಾರಗಳಿಲ್ಲದೆ ಸುಖವಾಗಿ ಬದುಕುವುದು ಇಂದಿನ ಪರಿಸರದಲ್ಲಿ ಸಾಧ್ಯವೇ ಇಲ್ಲ. ಏಕೆಂದರೆ ಇಂದು ಮನುಷ್ಯನ ಅವಶ್ಯಕತೆಗಳು ಹಿಂದೆಂದಿಗಿಂತಲೂ ಅಧಿಕವಾಗಿದೆ. ತನಗೆ ಇಂದು ಬೇಕಾಗುವ ಎಲ್ಲಾ ವಸ್ತುಗಳನ್ನು ತಾನೇ ತಯಾರಿಸಿಕೊಳ್ಳುವುದು ಸಾಧ್ಯವಿಲ್ಲ. ಆದುದರಿಂದ ಪರಸ್ಪರ ಸಹಕಾರದ ಮೇಲೆ ಜೀವನ ಅವಲಂಬಿಸಿದೆ. ಅರಿತ ವೈದ್ಯ ರೋಗಿಗೆ ಔಷಧೋಪಚಾರಮಾಡುತ್ತಾನೆ. ಅದಕ್ಕೆ ರೋಗಿ ಅವನಿಗೆ ಹಣ ನೀಡುತ್ತಾನೆ. ಕಲಿತ ಗುರು ಶಿಷ್ಯನಿಗೆ ಜ್ಞಾನ ನೀಡುತ್ತಾನೆ. ಗುರುವಿಗೆ ವ್ಯಕ್ತಿಯೋ, ಸಮಾಜವೋ, ಸರ್ಕಾರವೋ ಧನ ನೀಡುತ್ತದೆ. ಅದರಂತೆ ಧಾನ್ಯ, ವಸ್ತ್ರ ಮತ್ತು ಅನ್ಯವಸ್ತುಗಳನ್ನು ಮಾರಟ ಮಾಡುವವನೂ ಗ್ರಾಹಕನಿಗೆ ಆ ವಸ್ತುಗಳನ್ನು ಕೊಡುತ್ತಾನೆ. ಗ್ರಾಹಕ ಅವುಗಳಿಗೆ ಹಣ ಕೊಡುತ್ತಾನೆ. ವೈದ್ಯ, ಗುರು, ನ್ಯಾಯವಾದಿ ಇವರ ಕೆಲಸದಲ್ಲೂ ಹಣದ ವಿನಿಮಯವಾಗುತ್ತದೆ. ಹಣ ಕೊಟ್ಟರೂ ರೋಗಿ ವೈದ್ಯನನ್ನು, ಶಿಷ್ಯ ಗುರುವನ್ನು, ಕಕ್ಷೀಗಾರ ನ್ಯಾಯವಾದಿಯನ್ನು ಕೃತಜ್ಞತೆಯಿಂದ ಸ್ಮರಿಸುತ್ತಾನೆ. ಒಂದು ರೀತಿಯ ಬಾಂಧವ್ಯ ಬೆಳೆದಿರುತ್ತದೆ. ಗುರು ಶಿಷ್ಯನಿಗೆ ಜ್ಞಾನವನ್ನಿತ್ತನೋ ಇಲ್ಲವೋ, ಗುರುವಿನ ಸ್ಮರಣೆಯಿಂದ ಜ್ಞಾನ ಪಡೆದ ಏಕಲವ್ಯ ಗುರುವಾದ ದ್ರೋಣಾಚಾರ್ಯರಿಗೆ ತನ್ನ ಬೆರಳನ್ನೇ ಕಾಣಿಕೆಯಾಗಿ ಅರ್ಪಿಸಿದ. ಅರ್ಜುನ ದ್ರುಪದರಾಜನನ್ನೇ ಸೆರೆಹಿಡಿದು ತಂದು ಗುರುವಿಗೆ ಒಪ್ಪಿಸಿದ. ಇವರು ಈ ಕಾರ್ಯಮಾಡುವ ಅಗತ್ಯವಿರಲಿಲ್ಲ. ಆದರೆ ಕೃತಜ್ಞತೆಯ ಕುರುಹಾಗಿ ಈ ಕಾರ್ಯವೆಸಗಿದರು. ಇಂತಹ ಪ್ರಸಂಗಗಳು ಇತಿಹಾಸ – ಪುರಾಣಗಳಲ್ಲಿ ಸಹಸ್ರಾರು ದೊರೆಯುತ್ತವೆ. ಕೃತಜ್ಞತೆಯೆಂದರೆ ಸಹಾಯಮಾಡಿದವರಿಗೆ ಸದಾ ದಾಸನಾಗಿರಬೇಕೆಂದು ಅರ್ಥವಲ್ಲ. ಕೃತಜ್ಞತೆಯು ಮಾನವನನ್ನು ಮತ್ತೊಬ್ಬರಿಗೆ ಸಹಾಯಮಾಡುವಂತೆ ಪ್ರಚೋದನೆಗೊಳಿಸುತ್ತದೆ. ಆದರೆ ಇಂದಿನ ಸಮಾಜದಲ್ಲಿ ಸಹಾಯವನ್ನು ಅಪೇಕ್ಷಿಸುವವರೇ ಅಧಿಕವಾಗಿರುವುದರಿಂದ, ಕೃತಜ್ಞತೆಯಿಂದ ತೃಪ್ತರಾದವರು ಸಮಾಜಕ್ಕೆ ಹೆಚ್ಚುಹೆಚ್ಚು ಸಹಾಯ ಮಾಡುವಂತಾಗಬೇಕು. ಇಂದು ಸಮಾಜದಲ್ಲಿ ಸ್ವಲ್ಪ ಮಟ್ಟಿಗೆ ಕೃತಜ್ಞತೆಯ ಸ್ಥಳವನ್ನು ಪ್ರತೀಕಾರ ಆಕ್ರಮಿಸುತ್ತಿದೆ. ಜ್ಞಾನ ಕೊಟ್ಟ ಗುರುವಿಗೆ ಕೆಲವೊಮ್ಮೆ ಶಿಷ್ಯ ತಿರುಗುಬಾಣವಾಗಿದ್ದಾನೆ.

ಕಾಗೆಯೊಂದಗಳ ಕಂಡರೆ ಕರೆಯದೆ ತನ್ನ ಬಳಗವೇನು?
ಕೋಳಿಯೊಂದು ಗುಟುಕು ಕಂಡರೆ ಕೂಗಿ ಕರೆಯದೆ ತನ್ನ ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದರೆ ಕಾಗೆ ಕೋಳಿಗಳಿಗಿಂತ
ಕರಕಷ್ಟ ! ಕೂಡಲಸಂಗಮದೇವಾ.

(ಈ ವಚನದಲ್ಲಿ ಬಸವಣ್ಣನವರು ಸಾಮಾಜಿಕ ಜೀವನದ ಸಹಕಾರತತ್ವವನ್ನು ಮನುಷ್ಯನಿಗೆ ಕಾಗೆ-ಕೋಳಿಗಳ ಉದಾಹರಣೆ ಕೊಟ್ಟು ಮನ ನಾಚುವಂತೆ ತಿಳಿಸಿ ಹೇಳೆದ್ದಾರೆ. ಕಾಗೆ ಕೋಳಿಗಳು ಒಂದು ಅಗುಳು ಅಥವಾ ಗುಟುಕು ಕಂಡರೆ, ತನ್ನ ಬಳಗ ಹಾಗೂ ಕುಲವನ್ನೆಲ್ಲ ಕರೆದುಂಬುವುವು. ಹಾಗೆಯೇ ಮಾನವನು ಸಮಾಜದಲ್ಲಿ ನಿರ್ಮಿಸಲ್ಪಟ್ಟ ಜೀವನ ಸಾಮಾಗ್ರಿಗಳನ್ನು ತನ್ನ ಮಾನವ ಬಳಗವೆಲ್ಲವನ್ನು ಭಕ್ತಿ ಪಕ್ಷದಂತೆ ಅಂದರೆ; ಪವಿತ್ರ ಪ್ರೇಮದಿಂದ ಏಕೆ ಹಂಚಿಕೊಂಡು ಬಾಳಬಾರದು? ಹಾಗಾಗದಿದ್ದರೆ ಆತನು ಕಾಗೆ-ಕೋಳಿಗಿಂತಲೂ ಕನಿಷ್ಟ ಎಂದು ವಿಡಂಬಿಸಿದ್ದಾರೆ. ಮಾನವನೂ ಈ ರೀತಿ ತನ್ನ ವ್ಯಕ್ತಿತ್ವವನ್ನು ಸಜ್ಜುಗೊಳಿಸಿಕೊಳ್ಳಬೇಕಾದರೆ ಸತ್ಯ ಹಾಗೂ ಸದಾಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಈ ಮತ್ರ್ಮಲೋಕವೇ ದೇವಲೋಕವಾಗುವುದು)

ಶ್ರದ್ಧೆ

(ಪೂಜ್ಯ ಜಗದ್ಗುರುಗಳವರು ಮೈಸೂರು ಆಕಾಶವಾಣಿಯಲ್ಲಿ ಬಿತ್ತರಿಸಿದ ಸುಭಾಷಿತ)

ಮಾನವ ಕ್ರಿಯಾಶೀಲ ವ್ಯಕ್ತಿ. ಬದುಕಿರುವವರೆಗೂ ಏನಾದರೊಂದು ಕಾರ್ಯವನ್ನು ಮಾಡುತ್ತಲೇ ಇರುತ್ತಾನೆ. ತನ್ನ ಕ್ರಿಯೆಗೆ ತಕ್ಕೆ ಪ್ರತಿಫಲವನ್ನು ಬಯಸಿ ಕ್ರಿಯೆ ನಡೆಸುತ್ತಾನೆ. ‘ಕರ್ತವ್ಯ ಮಾಡುವುದು ನಮ್ಮ ಧರ್ಮ. ಫಲ ಕೊಡುವವನು ದೇವರು’ ಎಂದು ಹೇಳುವ ಮಾತು ರೂಢಿಯಲ್ಲಿದೆ. ‘ಕರ್ಮೇಣ್ಯೇ ವಾಧಿಕಾರಾಸ್ತೇ ಮಾಘಲೇಷು ಕದಾಚನ’ ಅಂದರೆ ಕರ್ಮ ಮಾಡುವುದು ನಿನ್ನ ಕತ್ರ್ಯವ್ಯ, ಫಲವನ್ನು ಕೊಡುವುದು ಪರಮಾತ್ಮನಿಗೆ ಸೇರಿದ್ದು –ಎಂಬುದು ಭಗವದ್ಗೀತೆಯ ಸಂದೇಶÀ. ಈ ದೃಷ್ಟಿಯಿಂದಲೇ ಕಾರ್ಯೊನ್ಮುಖರಾದ ವ್ಯಕ್ತಿಗಳ ಸಂಖ್ಯೆ ಕಡಿಮೆ. ಫಲಾಪೇಕ್ಷೆಯೇ ನಮ್ಮನ್ನು ಕಾರ್ಯಪ್ರವೃತ್ತರನ್ನಾಗಿ ಮಾಡುತ್ತದೆ. ಲೌಕಿಕ ಜೀವನದಲ್ಲಿರುವಾಗ ಎಲ್ಲರೂ ಫಲಾಪೇಕ್ಷಾರಹಿತರಾಗಿ ಕಾರ್ಯ ಮಾಡಬೇಕೆಂದು ಹೇಳುವುದು ಕೇವಲ ಉಪದೇಶವಾಣಿಯಾಗಿ, ಆಚರಣೆಗೆ ಬಾರದೇ ಹೋಗಬಹುದು. ಫಲಾಪೇಕ್ಷೆಯಿಂದ ಕಾರ್ಯ ಮಾಡಿದರೆ ತಪ್ಪೆಂದು ಹೇಳುವುದಿಲ್ಲ. ಆದರೆ, ಫಲಾಪೇಕ್ಷೆಯಿಂದ ಕಾರ್ಯಮಾಡುವವರ ಸಂಖ್ಯೆಗಿಂತಲೂ ಕಾರ್ಯಮಾಡದಯೇ ಫಲವನ್ನು ಅಪೇಕ್ಷಿಸುವವರೂ, ಲೋಕದಲ್ಲಿ ಅಧಿಕವಾಗಿದ್ದಾರೆ. ಅದರಲ್ಲೂ ಭಾರತದಲ್ಲಿ ಈ ಪ್ರವೃತ್ತಿ ಹೆಚ್ಚಾಗಿ ಬೆಳೆದಿದೆ. ಇದರ ದುಷ್ಪರಿಣಾವನ್ನು, ಇಡೀ ರಾಷ್ಟ್ರ ಅನುಭವಿಸಬೇಕಾಗಿ ಬಂದಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ಇಂತಹ ಸಹಸ್ರಾರು ನಿದರ್ಶನಗಳನ್ನು ಕಾಣುತ್ತೇವೆ. ಹೊಲದಲ್ಲಿ ಬೇಸಾಯ ಮಾಡುವ ರೈತ ಕಾರ್ಮಿಕ, ತನ್ನ ಕಾರ್ಯ ಮುಗಿಯಿತೆ ಎಂಬುದಷ್ಟನ್ನೇ ಗಮನಿಸುತ್ತಾನೆ. ಗಿರಣಿಗಳಲ್ಲಿ ದುಡಿಯುವ ಕಾರ್ಮಿಕ ತನ್ನ ನಿಗದಿಯಾದ ಕಾಲ ಮುಗಿಯುವುದು ಯಾವಾಗ ಎಂದು ನಿರೀಕ್ಷಿಸುತ್ತಿರುತ್ತಾನೆ. ರೈತ ತಾನು ತನ್ನ ದುಡಿಮೆಯಲ್ಲಿ ಅಗತ್ಯವಾದಷ್ಟು ಕೆಲಸಮಾಡಿರುವನೆ? ತಕ್ಕ ಫಲ ಪಡೆಯಲು ಅವಶ್ಯಕವಾದ ಎಲ್ಲಾ ಕೆಲಸವನ್ನು ಮಾಡಿರುವನೆ? ಎಂಬುದನ್ನು ಗಮನಿಸುವುದು ಅಪರೂಪ. ತನ್ನ ದುಡಿಮೆಯಿಂದ ತಾನು ನಿರೀಕ್ಷಿಸಿದ ಫಲ ಬರುತ್ತದೆಂಬ ಆತ್ಮ ವಿಶ್ವಾಸ ಬರುವಂತೆ ದುಡಿಯುವ ರೈತರ ಸಂಖ್ಯೆ ಎಷ್ಟಿದೆ ಎಂಬುದು ವಿವಾದಾಸ್ಪದ. ಇನ್ನು ಕಾರ್ಮಿಕನು ತನ್ನ ಕಾರ್ಯದಲ್ಲಿ ಎಷ್ಟು ಪ್ರಗತಿ ಸಾಧಿಸಿದ್ದಾನೆ? ತನ್ನ ಕರ್ತವ್ಯ ತನ್ನ ಮನಸ್ಸಿಗೆ ತೃಪ್ತಿ ತಂದಿರುವುದೇ ಎಂದು ಯೋಚಿಸಿ ಕರ್ತವ್ಯವನ್ನೆಸಗುವ ಪ್ರಸಂಗ ಸಹ ಇತ್ತೀಚಿಗೆ ಅಪೂರ್ವವಾಗುತ್ತಿದೆ. ಎಲ್ಲಕ್ಕಿಂತ ಮಿಗಿಲಾಗಿ ನಮ್ಮ ರಾಷ್ಟ್ರದ ಹಾಗೂ ಜಗತ್ತಿನ ಭವಿಷ್ಯ ನಿರ್ಮಾಪಕರಾದ ವಿದ್ಯಾರ್ಥಿವೃಂದದ ಗೊತ್ತುಗುರಿ ಏನು? ಮಾನವ ಜೀವನಪರ್ಯಂತ ವಿದ್ಯಾರ್ಜನೆ ಮಾಡಿದರೂ ಸಾಲದೆಂದು ವಿದ್ಯಾವಿನಯಸಂಪನ್ನರು ಹೇಳುತ್ತಾರೆ. ಈ ಮಾತು ಎಂದು ಎಲ್ಲರಿಗೂ ಅನ್ವಯಿಸಲು ಸಾಧ್ಯವೇ ಇಲ್ಲವಾಗಿದೆ. ಸರ್ಕಾರದ ನಿಯಮಗಳ ಪ್ರಕಾರ ವಿದ್ಯಾರ್ಥಿಗೆ ಕೆಲವು ವರ್ಷಗಳಾದರೂ ಅಭ್ಯಾಸಮಾಡಬೇಕಾದ ಅಗತ್ಯವಿದೆ. ಸುಮಾರು 15 ವರ್ಷಗಳಲ್ಲಿ ವಿದ್ಯಾರ್ಥಿ ಒಂದು ಪರಿಣಿತಿಯ ಮಟ್ಟವನ್ನು ಮುಟ್ಟಬೇಕೆಂದು ತಜ್ಞರು ನಿಶ್ಚಯಿಸಿದ್ದಾರೆ. ಅಷ್ಟು ವರ್ಷಗಳವರೆಗಾದರೂ ನಮ್ಮ ವಿದ್ಯಾರ್ಥಿಗಳು ವಿದ್ಯಾಭ್ಯಾಸ ತಪಸ್ಸೆಂದು ಭಾವಿಸಿ ಜ್ಞಾನಾರ್ಜನೆ ಮಾಡಿದರೆ ಜ್ಞಾನಸಂಪತ್ತನ್ನು ಗಳಿಸಬಹುದು. ಜಗತ್ತಿಗೆ ಅಮೂಲ್ಯ ಕೊಡುಗೆಯನ್ನು ಕೊಡಬಹುದು. ಆದರೆ ಇಂದು 15 ವರ್ಷವನ್ನು ತುಂಬಿಸುವುದಕ್ಕಾಗಿ, ನಿಯುಕ್ತ ಪರೀಕ್ಷೆಯಲ್ಲಿ ಹೇಗೋ ಉತ್ತೀರ್ಣನಾಗುವುದಕ್ಕಾಗಿಯೇ ಅಭ್ಯಾಸಮಾಡುವ ಪ್ರವೃತ್ತಿ ಬೆಳೆದಿದೆ. ಆದ್ದರಿಂದ ವಿದ್ಯಾರ್ಥಿಗಳ ಮತ್ತು ವಿದ್ಯಾಸಂಸ್ಥೆಗಳ ಸಂಖ್ಯೆ ಬೃಹತ್ತಾಗಿ ಬೆಳೆಯಿತ್ತಾದರೂ, ವಿದ್ಯಾರ್ಜನೆಯ ಮಟ್ಟ ನಿರೀಕ್ಷಿಸಿದಷ್ಟು ಗಾತ್ರದಲ್ಲಿ ಬೆಳೆಯುತ್ತಿಲ್ಲ. ಒಟ್ಟಿನಲ್ಲಿ ಇಂದು ಯಾವ ಕ್ಷೇತ್ರದಲ್ಲಿಯೂ ಕಾರ್ಯವನ್ನು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಗಳಿಂದ ಮಾಡುತ್ತಿಲ್ಲ. ಕಾರ್ಯಮಾಡದೆ ಫಲಪಡೆಯುವ ಸಂಚಿನಲ್ಲಿ ಅನೇಕರು ತೊಡಗಿದ್ದಾರೆ ಎನಿಸುತ್ತದೆ. ಜ್ಞಾನಿಗಳು ಯಾವ ಕಾರ್ಯ ಮಾಡಿದರೂ ಶ್ರದ್ಧೆಯಿಂದ ಮಾಡು ಎಂದಿದ್ದರು. “ಶ್ರದ್ಧಸ್ವ” ಎಂದು ಉಪನಿಷತ್ತು ಹೇಳಿದರೆ “ಶ್ರದ್ಧಾವಾನ್ ಲಭತೇ ಜ್ಞಾನಂ” ಎಂದು ಗೀತೆ ಹೇಳಿದೆ. ಇನ್ನು ನಮ್ಮ ಭವಿಷ್ಯ ಭವ್ಯವಾಗಬೇಕಿದ್ದರೆ ನಾವು ನಮ್ಮ ಕಾರ್ಯಗಳಲ್ಲಿ ಮೊದಲು ಶ್ರದ್ಧೆಯಿಂದ ನಿರತರಾಗಬೇಕಾದುದು ಅತ್ಯಗತ್ಯ. ನಮ್ಮ ಕಾರ್ಯ ಯಾವುದೇ ಆಗಿರಬಹುದು, ರೈತನ ಕಾರ್ಯ, ಕಾರ್ಮಿಕನ ಕ್ರಿಯೆ, ವಿದ್ಯಾರ್ಥಿಯ ಜ್ಞಾನಾರ್ಜನೆ, ಆಡಳಿತಗಾರರ ಕಾರ್ಯಾಚರಣೆ ಈ ಎಲ್ಲದರಲ್ಲಿಯೂ ಶ್ರದ್ಧೆಯಿರಬೇಕಾಗಿದೆ. ಕೋಟ್ಯಾಂತರ ರೂಪಾಯಿ ಖರ್ಚುಮಾಡಿದ ನಮ್ಮ ಪಂಚವಾರ್ಷಿಕ ಯೋಜನೆಗಳಿಂದ ನಮಗೆ ನಿರೀಕ್ಷಿಸಿದ ಫಲ ದೊರೆಯದೆ ಇರ ಬೇಕಾದರೆ, ಅದರ ಆಚರಣೆಯಲ್ಲಿ ಶ್ರದ್ಧೆಯ ಅಭಾವವಿದೆ. ಜೀವನ ಕೇವಲ ಯಾಂತ್ರಿವಾಗಿ ನಡೆದಿದೆ. ಈ ರೀತಿ ಆಗದೆ ಜೀವನ ಶ್ರದ್ಧಾಮಯವಾಗಬೇಕು. ಶ್ರದ್ಧೆ ಎಂದರೆ ಕ್ರಿಯೆಯಲ್ಲಿ ತನ್ಮಯತೆ ಮತ್ತು ಗುರಿ ಸಾಧಿಸುವುದರಲ್ಲಿ ಆತ್ಮವಿಶ್ವಾಸದಿಂದಿರುವುದು; ಶ್ರದ್ಧೆಯಿಂದ ಅಪಾರ ಕಾರ್ಯಸಾಧನೆಯಾಗಿದೆ. ಹರೆಯದ ಧೃವ, ಪರಮಾತ್ಮನನ್ನು ಕಂಡದ್ದು ತನ್ನ ಶ್ರದ್ಧೆಯಿಂದ, ಪ್ರಹ್ಲಾದ ಪುನೀತನಾದದ್ದು ಶ್ರದ್ಧೆಯಿಂದ, ಸಿದ್ದಾರ್ಥ ಬುದ್ಧನಾದದ್ದು ಶ್ರದ್ಧೆಯಿಂದ, ಮೋಹನದಾಸ ಕರಮ ಚಂದಗಾಂಧಿ ಮಹಾತ್ಮರಾದದ್ದು ಶ್ರದ್ಧೆಯಿಂದ; ಲೋಕದಲ್ಲಿ ಮಹಾನ್‍ಕಾರ್ಯಸಾಧನೆಗಳಾಗಿರುವುದು ಸಾಧಕನ ಶ್ರದ್ಧೆಯಿಂದಲೇ ಎಂಬುದು ಸರ್ವವಿಧಿತ. ನಾವು ಕೈಗೊಂಡ ಕಾರ್ಯಗಳಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊರೆದು ಶ್ರದ್ಧೆಯಿಂದ ಆಚರಿಸುವುದನ್ನು ಕಲಿತರೆ ತಕ್ಕ ಫಲ ನಮಗೆ ಲಭಿಸುತ್ತದೆ. ಆದುದರಿಂದ ನಮ್ಮ ಜೀವನ ಪ್ರತಿ ಹಂತದಲ್ಲೂ ಶ್ರದ್ಧಾಮಯವಾಗಬೇಕು. ಶ್ರದ್ಧೆ ನಮ್ಮ ನಿರೀಕ್ಷಿತಫಲದಾಯಕವಾಗುತ್ತದೆ. ನಮ್ಮ ಜೀವನ ಸಾರ್ಥಕವಾಗುತ್ತದೆ.

ಓಂ

ಕಾಗೆಯೊಂದಗಳ ಕಂಡರೆ ಕರೆಯದೆ ತನ್ನ ಬಳಗವನು ?
ಕೋಳಿಯೊಂದು ಗುಟುಕು ಕಂಡರೆ ಕೂಗಿ ಕರೆಯದೆ ತನ್ನ ಕುಲವೆಲ್ಲವ ?
ಶಿವಭಕ್ತನಾಗಿ ಭಕ್ತಿ ಪಕ್ಷವಿಲ್ಲದಿದ್ದರೆ ಕಾಗೆ ಕೋಳಿಗಳಿಗಿಂತ
ಕರಕಷ್ಟ ! ಕೂಡಲಸಂಗಮದೇವಾ.

[ಈ ವಚನದಲ್ಲಿ ಬಸವಣ್ಣನವರು ಸಾಮಾಜಿಕ ಜೀವನದ ಸಹಕಾರತತ್ವವನ್ನು ಮನುಷ್ಯನಿಗೆ ಕಾಗೆ-ಕೋಳಿಗಳ ಉದಾಹರಣೆ ಕೊಟ್ಟು ಮನ ನಾಚುವಂತೆ ತಿಳಿಸಿ ಹೇಳಿದ್ದಾರೆ. ಕಾಗೆ ಕೋಳಿಗಳು ಒಂದು ಅಗುಳು ಹಾಗೂ ಗುಟುಕು ಕಂಡರೆ, ತನ್ನ ಬಳಗ ಹಾಗೂ ಕುಲವನ್ನೆಲ್ಲ ಕರೆದುಂಬುವುವು. ಹಾಗೆಯೇ ಮಾನವನು ಸಮಾಜದಲ್ಲಿ ನಿರ್ಮಿಸಲ್ಪಟ್ಟ ಜೀವನ ಸಾಮಗ್ರಿಗಳನ್ನು ತನ್ನ ಮಾನವ ಬಳಗವೆಲ್ಲವನ್ನು ಭಕ್ತಿ ಪಕ್ಷದಂತೆ ಅಂದರೆ ; ಪವಿತ್ರ ಪ್ರೇಮದಿಂದ ಏಕೆ ಹಂಚಿಕೊಂಡು ಬಾಳಬಾರದು ? ಹಾಗಾಗದಿದ್ದರೆ ಆತನು ಕಾಗೆ-ಕೋಳಿಗಳಿಗಿಂತಲೂ ಕನಿಷ್ಠ ಎಂದು ವಿಡಂಬಿಸಿದ್ದಾರೆ. ಮಾನವನು ಈ ರೀತಿ ತನ್ನ ವ್ಯಕ್ತಿತ್ವವನ್ನು ಸಜ್ಜುಗೊಳಿಸಿಕೊಳ್ಳಬೇಕಾದರೆ ಸತ್ಯ ಹಾಗೂ ಸದಾಚಾರಗಳನ್ನು ಮೈಗೂಡಿಸಿಕೊಳ್ಳಬೇಕು. ಆಗ ಈ ಮರ್ತೃಲೋಕವೇ ದೇವಲೋಕವಾಗುವುದು.-ಸಂ]

ಭಕ್ತಿ

(ಪೂಜ್ಯ ಜಗದ್ಗುರುಗಳವರು ಮೈಸೂರು ಆಕಾಶವಾಣಿಯಲ್ಲಿ ಬಿತ್ತರಿಸಿದ ಸುಭಾಷಿತ)

ಮಾನವನಲ್ಲಿ ತ್ರಿಶಕ್ತಿಗಳು ಅಡಕವಾಗಿವೆ. ಅವೇ ಜ್ಞಾನ, ಭಾವನೆ ಮತ್ತು ಕ್ರಿಯಾ ಶಕ್ತಿಗಳು. ಪ್ಲೇಟೋ ಹೇಳಿರುವಂತೆ ಮಾನವರನ್ನು ಈ ಮೂರು ಶಕ್ತಿಗಳಿಗನುಗುಣವಾಗಿ ವಿಂಗಡಿಸಬಹುದು. ಉತ್ತಮ ಶಿಕ್ಷಣ ಪಡೆದ ವ್ಯಕ್ತಿ ಸುಜ್ಞಾನಿಯಾಗಿಯೂ ಸದ್ಭಾವನೆ ಹೊಂದಿದವನಾಗಿಯೂ, ಸತ್ಕ್ರಿಯೆಯಲ್ಲಿ ತೊಡಗಿದವನಾಗಿಯೂ ಇರುವವನಾಗಿದ್ದಾನೆ. ಜ್ಞಾನಕ್ಕೆ ಮಿದುಳು, ಭಾವನೆಗೆ ಹೃದಯವೂ, ಕ್ರಿಯೆಗೆ ಕೈಕಾಲುಗಲು ಶರೀರದಲ್ಲಿ ಮುಖ್ಯ ಅಂಗಗಳಾಗಿವೆ. ಈ ಅಂಗಗಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿ ಬಳಸಿಕೊಳ್ಳುವುದೇ ಉತ್ತಮ ಶಿಕ್ಷಣದ ಯತ್ನವಾಗಿದೆ.

ಮೋಕ್ಷಕ್ಕೆ ಜ್ಞಾನಮಾರ್ಗ, ಭಕ್ತಿಮಾರ್ಗ, ಹಾಗೂ ಕರ್ಮಮಾರ್ಗಗಳನ್ನು ಭಗವದ್ಗೀತೆಯಲ್ಲಿ ನಿರೂಪಿಸಲಾಗಿದೆ. ಜ್ಞಾನಕ್ಕೆ ಅಲ್ಲಮಪ್ರಭುವನ್ನು, ಭಕ್ತಿಗೆ ಬಸವಣ್ಣನವರನ್ನು, ಕರ್ಮಕ್ಕೆ ಸಿದ್ದರಾಮೇಶ್ವರರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಇವು ವಿಶಿಷ್ಟವಾದ ಶಕ್ತಿಗಳು.

ಇತಿಹಾಸದಲ್ಲಿ ದೇಹಶಕ್ತಿಯಿಂದಸಾಮ್ರಾಜ್ಯ ಸಂಸ್ಥಾಪಿಸಿ, ಮೆರೆದ ಚಕ್ರಾಧಿಪತಿಗಳು ಜನಮನದಿಂದ ದೂರಾಗಿದ್ದಾರೆ. ಭಕ್ತಿಯಿಂದ ದೇವರ ಮೆಚ್ಚುಗೆಗೆ ಪಾತ್ರರಾಗಿ, ಧರ್ಮಪ್ರವರ್ತಕರಾಗಿ, ಧರ್ಮಭೋಧಿಸಿದ ಮಹಾತ್ಮರು, ದಾಸವರೋಣ್ಯರು, ಶರಣರು ಜನಮನವನ್ನು ಸೂರೆಗೊಂಡಿದ್ದಾರೆ. ದೈವಮಾನವರಿಗೆ ಸೇತುವೆಯೋಪಾದಿ ಇದ್ದು ಜನರನ್ನು ಇವರು ದೇವರ ಕಡೆಗೆ ಕೊಂಡೊಯ್ದಿದ್ದಾರೆ, ಇವರ ಮಾರ್ಗ ಭಕ್ತಿಮಾರ್ಗ. ಇವರ ಆಚರಣೆ, ಭಕ್ತಿ ಇವರ ಭೋಧನೆ ಭಕ್ತಿ.

ಭಕ್ತಿ ಎಂಬುದು ಒಂದು ಸದ್ಭಾವನೆ. ಭಕ್ತಿ ಸುಜ್ಞಾನಕ್ಕೆ, ಸತ್ಕ್ರಿಯೆಗೆ ಹಾದಿ. ಭಕ್ತಿ ಸಮರ್ಪಣಾಭಾವವನ್ನುಂಟು ಮಾಡುತ್ತದೆ. ಯಾವುದಕ್ಕೆ ಈ ಭಕ್ತಿ ವಿiÁಸಲೋ, ಅದಕ್ಕಾಗಿ ಸರ್ವವನ್ನು ತ್ಯಾಗಮಾಡುವ, ಸರ್ವವನ್ನು ಸಮರ್ಪಿಸುವ ಭಾವನೆಯ ಬುಗ್ಗೆಯಂತಿರುತ್ತದೆ.
ರಾಷ್ಟ್ರಭಕ್ತಿ, ದೇಶಭಕ್ತಿ, ಮಾತೃಭಕ್ತಿ, ಪಿತೃಭಕ್ತಿ, ಪತಿಭಕ್ತಿ, ದೈವಭಕ್ತಿ, ಗುರುಭಕ್ತಿ ಇತ್ಯಾದಿ ಭಕ್ತಿಗಳನ್ನು ನಾವು ಕಾಣುತ್ತೇವೆ. ಮಹಾತ್ಮಗಾಂಧಿಯವರಂತಹವರ ರಾಷ್ಟ್ರಭಕ್ತಿಯಿಂದ ರಾಷ್ಟ್ರವು ಸ್ವಾತಂತ್ರ್ಯ ಪಡೆಯಿತು. ದಾಸ್ಯದಿಂದ ಬಿಡುಗಡೆಯಾಯಿತು. ಇಂದು ಸ್ವಾತಂತ್ರ್ಯ ಜೀವನ ನಡೆಸುವಂತಾಗಿದೆ. ದೇಶಭಕ್ತಿ ಪ್ರತಿಯೊಬ್ಬರಲ್ಲೂ ಇರಬೇಕಾದುದು ಅವಶ್ಯಕ. ಮಾತ್ರಭಕ್ತಿಯಿಂದ ಶಿವಾಜಿಯು ಹಿಂದೂರಾಜ್ಯ ಸ್ಥಾಪಿಸುವ ಶಕ್ತಿ ಪದೆದನು. ಪತಿಭಕ್ತಿ ಪರಾಯಣಳಾದ ಸಾವಿತ್ರಿಯು ಅಲ್ಪಾಯುವಾದ ತನ್ನ ಪತಿ ಸತ್ಯಾವಾಹನನನ್ನು ದೀರ್ಘಾಯುವಾಗಿ ಮಾಡಿಕೊಂಡಳು. ತನ್ನ ತಂದೆ ಮಾವಂದರಿಗೆ ಆದರ್ಶ ಪುತ್ರಿ-ಸೊಸೆಯಾಗಿ ಬಾಳಿದಳು.

ಇದೆಲ್ಲಕ್ಕಿಂತ ದೈವಭಕ್ತಿ ದೊಡ್ಡದು. ಮಾರ್ಕಂಡೇಯನು ಮೃತ್ಯಂಜಯನಾದ. ಪ್ರಹ್ಲಾದನು ವಿಷ್ಣುವಿನ ಪರಮಭಕ್ತನಾದ. ಸಿರಿಯಾಳನು ಚಿರಂಜೀವಿಯಾದ, ಭಕ್ತಿ ಪಥದಿಂದ ಏನೆಲ್ಲಾ ಸಾಧ್ಯವೆಂಬುದನ್ನು ನಾವು ಓದಿದ್ದೇವೆ, ಕೇಳಿದ್ದೇವೆ.

ಕಾಡಿನಲ್ಲಿ ಲಿಂಗವನ್ನಿಟ್ಟುಕೊಂಡು ಭಕ್ತಿಯಿಂದ ಪೂಜಿಸುತ್ತಿದ್ದ ಬೇಡರಕಣ್ಣಪ್ಪ ಅವನ ಸರ್ವಸ್ವವೆಲ್ಲಾ ಆ ಲಿಂಗವೇ ಆಗಿತ್ತು. ಅವನ ಸಂಪಾದನೆ ಎಲ್ಲಾ ಲಿಂಗಾರ್ಪಿತವಾಗಿತ್ತು. ಒಮ್ಮೆ ತನ್ನ ದೈನಂದಿನ ಪೂಜೆಗಾಗಿ ಬಂದಾಗ ಲಿಂಗದ ಕಣ್ಣಿನಿಂದ ರಕ್ತ ಸುರಿಯುತ್ತಿರುವುದನ್ನು ನೋಡಿದ. ಇದೇಕೆ ಹೀಗಾಯ್ತು ಎಂದು ಚಿಂತಿಸಿ, ಔಶಧೋಪಚಾರ ಮಾಡಿದ. ಲಿಂಗದ ರಕ್ತ ಕಣ್ಣೀರು ನಿಲ್ಲಲೇ ಇಲ್ಲ. ಕೊನೆಗೆ ಅವನಿಗೊಂದು ಉಪಾಯ ಹೊಳೆಯಿತು, ತನ್ನ ಕಣ್ಣನ್ನೇ ಲಿಂಗಕ್ಕೆ ಅರ್ಪಿಸಲು ತೀರ್ಮಾನಿಸಿದ, ತನ್ನ ಮೊದಲ ಕಣ್ಣನ್ನು ಕಿತ್ತು ಲಿಂಗಕ್ಕೆ ಧರಿಸಿದ. ತನ್ನ ಎರಡನೇ ಕಣ್ಣನ್ನು ಕಿತ್ತು ಲಿಂಗಕ್ಕೆ ಸಮರ್ಪಿಸಬೇಕಿತ್ತು. ಆ ಕಣ್ಣು ಎಲ್ಲಿದೆ ಎಂಬುದನ್ನು ಗುರ್ತಿಸಲು ತನ್ನ ಮೆಟ್ಟುಗಾಲನ್ನು ಲಿಂಗದ ಕಣ್ಣಿರುವ ಜಾಗದಲ್ಲಿ ಇಟ್ಟ. ಕೊನೆಗೆ ಎರಡನೇ ಕಣ್ಣುಕಿತ್ತ. ಮೆಟ್ಟುಗಾಲಿನ ಗುರ್ತಿನಲ್ಲಿ ಆ ಕಣ್ಣನ್ನು ಇಟ್ಟ. ಲಿಂಗಕ್ಕೆ ಕಣ್ಣೀರು ಸುರಿವುದು ನಿಂತಿತು. ಕುರುಡಾದ ಕಣ್ಣಪ್ಪ. ಶಿವನು ಇವನ ಭಕ್ತಿ ಪರೀಕ್ಷಿಸಿದ. ಆ ಪರೀಕ್ಷೆಯಲ್ಲಿ ಕಣ್ಣಪ್ಪನಿಗೆ ಸೋಲುಂಟೆ ! ಅವನು ಪರಮಭಕ್ತ. ಶಿವನ ಸಾಕ್ಷಾತ್ಕಾರವಾಯ್ತು. ಕಣ್ಣಪ್ಪ ಚಿರಾಯುವಾದ.

ಶಿವ ಒಲಿದೊಡೆ ಎಲ್ಲಾ ಸಾಧ್ಯವೆಂಬುದನ್ನು ಬಸವಣ್ಣನವರ ವಾಣಿಯಿಂದ ನಾವು ತಿಳಿಯಬಹುದು.
“ನೀನೊಲಿದೊಡೆ ಕೊರಡು ಕೊನರುವುದಯ್ಯ
ನೀನೊಲಿದೊಡೆ ಬರಡುಹಯನವುದಯ್ಯ
ನೀನೊಲಿದೊಡೆ ಪಡಿಪದಾರ್ಥಗಳೆಲ್ಲಾ ಇದಿರಲ್ಲಿಪ್ಪವು. ನೀನೊಲಿದೊಡೆ
ವಿಷವೆಲ್ಲ ಅಮೃತವಹುದಯ್ಯ ಕೂಡಲಸಂಗಮದೇವ.
ಮಹಾದೇವನ ಒಲುಮೆಯು ಅದ್ಭುತವಾದುದು ನಂಬಿಕೆಯಿಂದ, ಭಕ್ತಿಯಿಂದ ಪರಮಾತ್ಮನನ್ನು ಪೂಜಿಸಿದೆಯಾದೊಡೆ ಎಲ್ಲಾ ಇಷ್ಟಾರ್ಥಗಳು ಸಿದ್ದಿಸುವುದಲ್ಲದೆ, ಈ ಬಂಧನದಿಂದ ಬಿಡುಗಡೆ ಹೊಂದಬಹುದು.

ಧರ್ಮ ಕ್ರಾಂತಿಯ ನೇತಾರ ಬಸವಣ್ಣ

(ಪೂಜ್ಯ ಜಗದ್ಗುರುಗಳವರು ಮೈಸೂರು ಆಕಾಶವಾಣಿಯಲ್ಲಿ ಬಿತ್ತರಿಸಿದ ಸುಭಾಷಿತ)

ಭರತಭೂಮಿ ಜಗದುದ್ಧಾರಕರಾದ ಅನೇಕ ಪುಣ್ಯಪುರುಷರಿಗೆ ಜನ್ಮವಿತ್ತನಾಡು. ಭಾರತದ ಇತಿಹಾಸದಲ್ಲಿ 12ನೇ ಶತಮಾನ ಒಂದು ಚಿರಸ್ಮರಣೀಯ ಯುಗ. ಏಕೆಂದರೆ ಈ ಕಾಲದಲ್ಲೇ ಬಸವಣ್ಣನವರು ಮನುಕುಲದ ಬಾಳಿನ ಬೆಳಕಾಗಿ ಬಂದವರು. ಬಸವಣ್ಣನವರು ಶತಮಾನಗಳಿಂದ ನಡೆದು ಬಂದ ಅರ್ಥಹೀನ ಅಂಧಾನುಕರಣದ ಬಂಧನವನ್ನು ಕಿತ್ತೊಗೆದು ಮಾನವತೆಯನ್ನು ಒಂದುಗೂಡಿಸುವ ಮಹಾಕಾರ್ಯದಲ್ಲಿ ತೊಡಗಿ ಜಗಜ್ಯೋತಿಯೆನಿಸಿದನು. ಶರಣರು ನುಡಿದಂತೆ “ಕಲ್ಯಾಣವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ತೈಲವನೆರದು ಆಚಾರವೆಂಬ ಬತ್ತಿಗೆ ಬಸವಣ್ಣನೆಂಬ ಜ್ಯೋತಿಯ ಮುಟ್ಟಿಸಲು ತೊಳಗಿ ಬೆಳಗುತ್ತಿಪ್ಪುದು ಶಿವನ ಪ್ರಕಾಶ”. ಎಂದಂತೆ ತೊಳಗಿ ಬೆಳಗಿದರು (ಜ್ವಾಜ್ವಲಿಸಿದರು)

ಬಸವಣ್ಣನವರು ತಮ್ಮ ಆತ್ಮಶಕ್ತಿ ಸಾಧನೆಯಿಂದ ಮಹಾನ್ ವ್ಯಕ್ತಿಯಾದರು. ಸಾಮಾನ್ಯವಾದ ಕರಣಿಕ ವೃತ್ತಿಯಿಂದ ಜೀವನವನ್ನು ಆರಂಭಿಸಿ ಚಾಲುಕ್ಯ ಸಾಮ್ರಾಜ್ಯದ ಮಹಾಮಂತ್ರಿಯಾದರು. ಸಂಸಾರದಲ್ಲಿದ್ದೂ ಸಂಸಾರವನ್ನು ಗೆದ್ದು ವಿಭೂತಿ ಪುರುಷರೆನಿಸಿದರು. ಅಂದಿನ ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿದ್ದ ತೊಡಕುಗಳನ್ನು, ಭಿನ್ನ ಭಾವನೆಗಳನ್ನು ಬಿಡಿಸುವುದರಲ್ಲಿ ಯಶಸ್ಸು ಗಳಿಸಿದ ಮಹಾಪುರುಷರು.

ಜನ ಜೀವನದಲ್ಲಿ ಇರುವ ಮೇಲು-ಕೀಳು, ಹಿರಿಯ-ಕಿರಿಯ, ಉತ್ತಮ-ನೀಚ, ಎಂಬ ಭಿನ್ನತೆಯನ್ನು ಅಳಿಸಲು ಯತ್ನಿಸಿ.

“ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ
ಇವ ನಮ್ಮವ, ಇವ ನಮ್ಮವ, ಇವ ನಮ್ಮವನೆಂದೆನಿಸಯ್ಯ
ಕೂಡಲ ಸಂಗಮದೇವ
ನಿಮ್ಮ ಮನೆಯ ಮಗನೆಂದಿನಿಸಯ್ಯಾ.”

ಎಂದು ಸಾರಿ ಎಲ್ಲರಲ್ಲಿಯೂ ಚೇತನ ಸ್ವರೂಪನಾಗಿರುವ ಪರಮಾತ್ಮ ಎಲ್ಲ ಜೀವರ ಸೂತ್ರಧಾರಿ, ಅಂದಮೇಲೆ ಯಾವುದೇ ರೀತಿಯ ಭಿನ್ನಭಾವಗಳು ಸಮಾಜದಲ್ಲಿ ಇರಬಾರದೆಂದು ಸಾರಿದರು. ಶತಶತಮಾನಗಳಿಂದ ಎಲ್ಲಾ ರೀತಿಯಿಂದಲೂ ಶೋಷಿತರಾದ ಅಸ್ಪೃಶ್ಯರನ್ನು ಶರಣರೆಂದೆನಿಸಿದ ಮಹಾನ್ ಕ್ರಾಂತಿ ಪುರುಷರು. ಅವರು ಸಮಾಜೋದ್ಧಾರಕರು, ಧರ್ಮೋದ್ಧಾರಕರು ಆದ ಯುಗ ಪ್ರವರ್ತಕರೆನ್ನಬಹುದು. ಸಮಾಜದಿಂದ ಕಡೆಗಣಿಸಲ್ಪಟ್ಟ ಹರಳಯ್ಯ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಡೋಹರ ಕಕ್ಕಯ್ಯ, ಮೋಳಿಗೆ ಮಾರಯ್ಯ ಮುಂತಾದ ಹಿಂದುಳಿದ ಭಕ್ತರಿಗೆ ಸಮಾನತೆಯ ಕುರುಹಾಗಿ, ಆತ್ಮಶಕ್ತಿಯನ್ನರಿಯುವ ದರ್ಪಣವನ್ನಾಗಿ ಇಷ್ಟಲಿಂಗವನ್ನಿತ್ತು ಅನುಗ್ರಹಿಸಿದರು ಮತ್ತು ಆಧ್ಯಾತ್ಮದ ತುಟ್ಟತುದಿಯನ್ನು ಮುಟ್ಟಿದ ಅಲ್ಲಮಪ್ರಭು, ಸಿದ್ಧರಾಮೇಶ್ವರ, ಚನ್ನಬಸವಣ್ಣ, ಅಕ್ಕಮಹಾದೇವಿ ಮುಂತಾದ ಮಹಾಶರಣರ ಪಂಕ್ತಿಯಲ್ಲಿ ಸಮಾನರನ್ನಾಗಿಸಿ ಇತಿಹಾಸದಲ್ಲಿ ಅಪೂರ್ವ ಕ್ರಾಂತಿಯನ್ನೆಸಗಿದರು.

ಬಸವಣ್ಣನವರು ಅಂದು ಕಟ್ಟಿ ಬೆಳೆಸಿದ ಮಹಾಮನೆಯ ಅನುಭವ ಮಂಟಪದಲ್ಲಿ ಎಲ್ಲ ಜಾತಿಯ, ಎಲ್ಲ ಭಾಷೆಯ, ಎಲ್ಲ ನಾಡಿನ ಆತ್ಮಸತ್ಯಾನ್ವೇಷಿಗಳು ಒಂದುಗೂಡಿ. ನಾವೆಲ್ಲ ಒಂದೆ ಎಂಬ ಭಾವನೆಯಿಂದ ಬೆಳೆದು ಬೆಳಗಿದರು. ಅವರಿಂದ ಧರ್ಮ ಭಂಡಾರಕ್ಕೆ, ಕನ್ನಡದ ವಚನ ಸಾಹಿತ್ಯ ಸಂಪತ್ತಿಗೆ ಅಮೂಲ್ಯ ಕೊಡುಗೆಯನ್ನು ಕೊಡಿಸಿದ ಬಸವಣ್ಣನವರ ಶಕ್ತಿಸಾಧನೆ ಅಸಾಧಾರಣವಾದುದು.

ಸಮಾಜದ ಸಮಾನತೆಯ ಸಾಮಾಜಿಕ ಕ್ರಾಂತಿಯನ್ನೆಸಗಿದ ಬಸವಣ್ಣನವರು ರಾಷ್ಟ್ರದ ಆರ್ಥಿಕ ವಿಚಾರದತ್ತ ಕೊಟ್ಟ ಕೊಡುಗೆ ಅದ್ವಿತೀಯವಾದದ್ದು. ಕಾಯಕವೇ ಕೈಲಾಸವೆಂಬ ದಿವ್ಯ ಸಂದೇಶವನ್ನು ಬಿತ್ತರಿಸಿ, ಮಾನವ ತನ್ನ ಬದುಕಿಗಾಗಿ ಯಾವುದಾದರೊಂದು ಸತ್ಯಶುದ್ಧವಾದ ಕಾಯಕವನ್ನು ಅವಲಂಬಿಸಲೇಬೇಕು. ದುಡಿದುದನ್ನು ತನ್ನೊಬ್ಬನಿಗೇ ಅಲ್ಲ ಇಡೀ ಸಮಾಜದ ಅಭ್ಯುದಯಕ್ಕೆ ನೀಡಬೇಕೆಂಬ ದಿವ್ಯತತ್ವವನ್ನು ಅಂದಿನ ಸಮಾಜದಲ್ಲಿ ಕಟ್ಟು ನಿಟ್ಟಾಗಿ ಅನುಷ್ಠಾನಕ್ಕೆ ತಂದರು. ಅದರ ಸಂಕೇತವಾಗಿ ನುಲಿಯ ಚೆಂದಯ್ಯ, ಆಯ್ದಕ್ಕಿ ಮಾರಯ್ಯ, ಮಡಿವಾಳ ಮಾಚಯ್ಯ ಮುಂತಾದ ನೂರಾರು ಶರಣರು ನಿರ್ದಿಷ್ಟ ಕಾಯಕವನ್ನು ಅವಲಂಬಿಸಿದರೆಂಬುದು ವ್ಯಕ್ತವಾಗುತ್ತದೆ. ಧನ ಅಥವಾ ಸಂಪತ್ತು ಶರಣರ ದೃಷ್ಟಿಯಲ್ಲಿ ಮಾಹೆಯೂ ಅಲ್ಲ, ತಿರಸ್ಕರಣೀಯವೂ ಅಲ್ಲ. ಇದು ಜೀವನದ ಎಲ್ಲ ಕಾರ್ಯಗಳಿಗೂ ಅತ್ಯಾವಶ್ಯಕವಾದುದು. ಸಾಧನೆಯ ಮಾರ್ಗದಲ್ಲಿ ಕೂಡ ಸಂಪತ್ತು ತಿರಸ್ಕಾರಕ್ಕೆ ಗುರಿಯಾಗಬೇಕಿಲ್ಲ. ಆದರೆ ಅದು ಮೋಹ ಮೂಲವಾಗಿ ಬಂಧಕವಾಗಲಾರದು. ಅದನ್ನು ಪಡೆಯುವ ಮಾರ್ಗ ಮಾತ್ರ ಪರಿಶುದ್ಧವಾದದ್ದಾಗಿರಬೇಕು. ಅದು ಸಮಾಜದ ಜನರಿಗೆ ಉಪಯೋಗಕ್ಕೆ ಬರಬೇಕು. ಮನುಷ್ಯ ಕೇವಲ ಗಳಿಸುವುದನ್ನು ಕಲಿತರೆ ಸಾಲದು ಅದನ್ನು ಹೇಗೆ ಬಳಸಬೇಕು ಎಂಬುದನ್ನು ಅರಿತಿರಬೇಕು. ನಮ್ಮ ಭಾರತದ ಆರ್ಥಿಕ ವಿಷಮತೆಗೆ ಈ ತತ್ವವನ್ನು ಅರಿಯದಿರುವುದೇ ಕಾರಣ. (ಒಂದು ಕಡೆ ಕಣ್ಣನ್ನೇ ಅಂಧವಾಗಿಸುವ ತೀವ್ರ ಬೆಳಕು, ಮತ್ತೊಂದೆಡೆ ಕಿಂಚಿತ್ ಬೆಳಕೂ ಇಲ್ಲದ ಕಾರ್ಗತ್ತಲೆ) ಉಳ್ಳವರು ಇಲ್ಲದವರ ಬಗ್ಗೆ ಸಹಾನುಭೂತಿಯಿಂದ, ಮಾನವತೆಯಿಂದ ವರ್ತಿಸುವುದೇ ಧರ್ಮದ ತಿರುಳು. ಸಂಗ್ರಹವಾದದ್ದು ಸರಿಯಾದ ರೀತಿಯಲ್ಲಿ ಸಮಾಜಕ್ಕೆ ವಿತರಣೆಯಾಗದಿದ್ದರೆ ಆಂದೋಳನ ಅನಿವಾರ್ಯ. ಹೀಗೆ ಮಾಡಿದ್ದರೆ ನಾವು ಪಶುಪಕ್ಷಿಗಳಿಗಿಂತ ಕಡೆ. ಬಸವಣ್ಣನವರ ಮಾತಿನಲ್ಲೇ ಹೇಳುವುದಾದರೆ-

‘ಕಾಗೆ ಒಂದಗುಳ ಕಂಡರೆ ಕರೆಯದೆ ತನ್ನ ಬಳಗವನು ?
ಕೋಳಿ ಒಂದು ಗುಟುಕ ಕಂಡಡೆ ಕೂಗಿ ಕರೆಯದೆ ತನ್ನ ಕುಲವ ನೆಲ್ಲವ ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಹಾಗೆ ಕೋಳಿಯಿಂದ ಕರಕಷ್ಟ
ಕೂಡಲ ಸಂಗಮದೇವಾ’.

ಕಾಯಕವೆಂದು ಕಾಯುವ ಬಳಲಿಸದೆ, ತನುಕರಗದೆ, ಮನನೋಯದೆ, ಬೇಡಿಕಾಡಿ ಮಾಡುವುದು ದಾಸೋಹವಾಗುವುದಿಲ್ಲ. ತನು ಮತ್ತು ಧನ ಇವೆರಡು-ಇವುಗಳನ್ನು ಉಪಯೋಗಿಸುವ ಮನದಿಂದ ಮಹತ್ತನ್ನು ಪಡೆಯುತ್ತದೆ.

ಅವರ ವಿಚಾರಧಾರೆ ಅಂದಿನ ಸಮಾಜಕ್ಕೆ ಮಾತ್ರವಲ್ಲದೆ ಎಂದೆಂದಿಗು ಎಲ್ಲರಿಗೂ ಮಾರ್ಗದರ್ಶಕವಾಗುವಷ್ಟು ವ್ಯಾಪಕವಾದ ಶಕ್ತಿಯನ್ನು ಪಡೆದಿದೆ. ಏಕೆಂದರೆ ಅವರು ಧರ್ಮದ ವಿಚಾರದಲ್ಲಾಗಲೀ, ಸಮಾಜ, ವ್ಯತಿ ಇವುಗಳ ಅಭ್ಯುದಯದ ವಿಚಾರದಲ್ಲಾಗಲೀ ಅಂಧ ಶ್ರದ್ಧೆಯನು ಅವಲಂಬಿಸದೆ ಜೀವನದ ಹೋರಾಟಕ್ಕೆ ಚಿರಂತನವಾದ ಉತ್ತರವನ್ನು ಕಂಡುಕೊಂಡು, ಅದನ್ನು ತಮ್ಮ ಆಚರಣೆಯಲ್ಲಿ ತಂದು ಅದಕ್ಕೆ ಪುನರ್ಜನ್ಮವನ್ನಿತ್ತು ಪೂರ್ಣಧರ್ಮದ ಜೀವಂತ ಶಕ್ತಿಯನ್ನಾಗಿಸಿದರು.

ಸತ್ಯವೆನಿಸಿದುದನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಪ್ರತಿಪಾದಿಸಿದರು. ಸತ್ಯವನ್ನು ಸಾರಿದ ಅವರ ನುಡಿಗಳು ಕ್ರಾಂತಿಕಾರಕವಾಗಿ ಪರಿಣಮಿಸಿದವು. ಮತ್ತು ಧರ್ಮಕ್ಕೆ ಸಮಾಜಕ್ಕೆ ಅಂಟಿದ ಕೊಳೆಯನ್ನು ತೊಳೆದು ಬೆಳಕನ್ನು ಉಜ್ವಲಗೊಳಿಸಲು ಸಹಾಯಕವಾದವು.
ಬಸವಣ್ಣನವರು ಗಹನವಾದ, ಜನಸಾಮಾನ್ಯರಿಗೆ ನಿಲುಕದ, ತಾತ್ವಿಕ ಚರ್ಚೆಯನ್ನು ಬೋಧಿಸಲಿಲ್ಲ. ಈ ಜಗತ್ತಿನಲ್ಲಿ ಮಾನವನಿಗೊಂದು ವಿಶಿಷ್ಟಸ್ಥಾನವಿದೆ. ಮನುಷ್ಯನ ಬದುಕು ಸುಂದರವಾಗಿರಬೇಕಾದರೆ, ತನ್ನಂತೆಯೇ ಇರುವ ಮತ್ತೊಬ್ಬ ಮನುಷ್ಯನೊಡನೆ ಹೇಗೆ ವರ್ತಿಸಬೇಕು ಎಂಬುದನ್ನು ಬೋಧಿಸಿದರು. ಧಮಮದ, ವಿದ್ಯಾಮದ, ಇನ್ನಾವ ಮದದಿಂದಲೋ ಅಹಂಕಾರ ಭರಿತನಾಗಿ, ಇತರರನ್ನು ತುಚ್ಛವಾಗಿ ಕಾಣಬಾರದು.

ಏನ ಬಂದಿರಿ, ಹದುಳವಿದ್ದಿರೆ ಎಂದಡೆ
ನಿಮ್ಮ ಮೈ ಸಿರಿ ಹಾರಿ ಹೋಹುದೆ ?
ಕುಳ್ಳಿರೆಂದಡೆ ನೆಲಕುಳಿ ಹೋಹುದೆ ?
ಒಡನೆ ನುಡಿದರೆ ಸಿರಿ ಹೊಟ್ಟೆಯೊಡೆವುದೆ ?
ಕೊಡಲಿಲ್ಲದಿದ್ದಡೊಂದು ಗುಣವಿಲ್ಲದಿದ್ದಡೆ,
ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲ ಸಂಗಮ ದೇವರು.

ಬಸವಣ್ಣನವರ ಪ್ರತಿಯೊಂದು ವಚನ ನೇರವಾದವು, ಲೋಕದ ಡೊಂಕನ್ನು ತಿದ್ದುವಂಥವು, ಸಾರ್ವಕಾಲಿಕ ಸತ್ಯವಾದವು. ಅಂತೆಯೇ ‘ಆಚಾರವೇ ಸ್ವರ್ಗ, ಅನಾಚಾರವೇ ನರಕ, ಸತ್ಯವ ನುಡಿವುದೇ ದೇವಲೋಕ, ಮಿಥ್ಯವ ನುಡಿವುದೇ ಮರ್ತ್ಯಲೋಕ. ಮುಂತಾದ ನುಡಿಗಳು ಸದಾ ಸ್ಮರಣಾರ್ಹವಾದವುಗಳು. ಸ್ವಾರ್ಥ, ಅಹಂಕಾರ, ದುರಾಶೆ ನಿಂದನೆ-ಮುಂತಾದವುಗಳನ್ನು ಬದಿಗೊತ್ತಿ ಮಾನವೀಯ ಗುಣಗಳನ್ನು ಬೆಳೆಸಿಕೊಳ್ಳಲು ಹೇಳಿದರು. ಈ ಬುದ್ಧಿವಾದ ಎಲ್ಲ ಕಾಲಕ್ಕೂ ಅನ್ವಯವಾದದ್ದು.

ಬಸವಣ್ಣನವರು 12ನೇ ಶತಮಾನದ ಕ್ರಾಂತಿಕಾರಕ ಪುರುಷರು. ಅಂದಿನ ಸಮಾಜದಲ್ಲಿ ಕಂಡುಬಂದ ಅಂಕುಡೊಂಕುಗಳನ್ನು ಸೂಕ್ಷ್ಮವಾಗಿ ಗಮನಿಸಿ, ಲೋಕದ ಡೊಂಕನ್ನು ತಿದ್ದಲು ಶರಣ ಸಮೂಹವನ್ನೇ ಬೆಳೆಸಿದರು. ಅಧರ್ಮ, ಅನ್ಯಾಯ, ಅತ್ಯಾಚಾರ, ಮೂಢನಂಬಿಕೆಗಳನ್ನು ಧೈರ್ಯವಾಗಿ ಎದುರಿಸಿ ತಿಳಿ ಭಾಷೆಯ ವಚನಗಳ, ಅವರ ಮನಸ್ಸಿಗೆ ನಾಟುವಂತೆ ಮಾಡಿ, ಅದು ಪರಿಣಾಮ ಕಾರಿಯಾಗಿ ಅದರ ಮನಸ್ಸಿನಲ್ಲಿ ಪ್ರಭಾವ ಬೀರುವಂತೆ ಮಾಡಿದ್ದಾರೆ, ನಡೆದಂತೆ ನುಡಿದು, ನುಡಿದಂತೆ ನಡೆದು ಆದರ್ಶ ತೋರಿದ್ದಾರೆ. ಈ ಶರಣ ಸಮೂಹದ ನೇತಾರರು ತಾವೇ ಆಗಿದ್ದರೂ ‘ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ’ ಎಂದು ಹೇಳಿ ವಿನಯ ತೋರಿದ್ದಾರೆ.

ಬಸವಣ್ಣನವರ ನಡೆನುಡಿಗಳಲ್ಲಿ ಎಂದೂ ಭಿನ್ನತೆ ಇರಲಿಲ್ಲ. ಆದುದರಿಂದ ಅವರ ನುಡಿ ಸಾಮಾನ್ಯವಾದುದಲ್ಲ.

ಭಕ್ತಿ ಸುಭಾಷೆಯ ನುಡಿಯ ನುಡಿವೆ, ನುಡಿದಂತೆ ನಡೆವೆ,
ನಡೆಯೊಳಗೆ ನುಡಿಯ ಪೂರೈಸುವ
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ ;
ಒಂದು ಜವೆಕೊರತೆಯಾದೊಡೆ
ಎನ್ನನದ್ಧಿ ನೀನೆದ್ದು ಹೋಗು, ಕೂಡಲ ಸಂಗಮದೇವಾ

ಎಂದು ಶಿವನಿಗೆ ಆಣೆಯಿಟ್ಟು ನಡೆದವರು. ಆದುದರಿಂದ ಮನುಷ್ಯ ನಡೆ-ನುಡಿಗಳಲ್ಲಿ ಅಂತರವಿಲ್ಲದಂತೆ ವರ್ತಿಸುವುದೇ ಜೀವನದ ಪ್ರಮುಖ ಸಾಧನೆ ಎಂಬ ಮಹಾನ್ ಸಂದೇಶವನ್ನು ಸಾರಿದ್ದಾರೆ. ಆಗ ನಾವು ಪರಮಾತ್ಮನ ಕೃಪೆಗೆ ಪಾತ್ರರಾಗುತ್ತೇವಷ್ಟೇ ಅಲ್ಲದೆ ಸಮಾಜದಲ್ಲಿರುವ ಈರ್ಷೆ, ಅಸೂಯೆ, ದ್ವೇಷ, ಅಂತಃಕಲಹ ಮುಂತಾದ ದುರ್ಗುಣಗಳು ದೂರವಾಗಿ ಸುಂದರವಾದ ಸಮಾಜ ನಿರ್ಮಾಣವಾಗುತ್ತದೆ. ಅವರ ನುಡಿಯಲ್ಲಿ ಇಂದು ನಮ್ಮ ಮುಂದೆ ಬರುವ ಸಮಸ್ಯೆಗಳನ್ನು ಬಿಡಿಸಬಲ್ಲ ಅಮೃತ ಸಂದೇಶಗಳಿವೆ. ಬಸವಣ್ಣನವರ ಜೀವನ ವಿಶ್ವದ ಜನಾಂಗಕ್ಕೆ ಆದರ್ಶಪ್ರಾಯವಾದುದು. ಆದರೆ ಜಗದುದ್ಧಾರಕ್ಕಾಗಿ ಬಂದ ವಿಶ್ವಮಾನವರನ್ನು ಒಂದು ಜಾತಿಯ, ಒಂದು ಕಾಲದ, ಒಂದು ನಾಡಿನ ವೃತ್ತದಲ್ಲಿ ಬಂಧಿಸಿ ಅವರ ಮಹೋನ್ನತ ವ್ಯಕ್ತಿತ್ವವನ್ನು, ಅವರು ಸಾರಿ ತೋರಿದ ಆಧ್ಯಾತ್ಮಿಕ ಮೌಲ್ಯಗಳನ್ನು ಅವರವರ ಅನುಯಾಯಿಗಳೇ ಸಂಕುಚಿತಗೊಳಿಸಿರುವುದು ವಿಷಾದಕರ ಸಂಗತಿ. ವೈಜ್ಞಾನಿಕವಾಗಿ ಮಹೋನ್ನತಿಯನ್ನು ಸಾಧಿಸಿರುವ ನಾವು ಇಂದಾದರೂ ಬಸವಣ್ಣನವರಂಥ ಮಹಾನುಭಾವರಿಂದ ಬಿತ್ತರಿಸಲ್ಪಟ್ಟ ವಿಶ್ವವ್ಯಾಪಕವಾದ ಜೀವನ ಮೌಲ್ಯಗಳನ್ನು ಮನಗಾಣಬೇಕಾಗಿದೆ. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಜಗದ ಜನರೆಲ್ಲ ಒಂದೆಂಬ ಭಾವನೆಯತ್ತ ಸಾಗಬೇಕಾಗಿದೆ. ಆದುದರಿಂದ ಬಸವಣ್ಣನವರ ಸಂದೇಶ ಇಂದಿನ ಪರಿಸ್ಥಿತಿಯಲ್ಲಿ ದೇಶ, ಕಾಲ, ಜಾತಿ, ಮತ, ಪಂಥಗಳ ಬಂಧನವನ್ನು ಮೀರಿ ವಿಶ್ವವ್ಯಾಪಿಯಾಗುವಂತೆ ಮಾಡಬೇಕಾದುದು ಬಸವಣ್ಣನವರ ವಿಷಯದಲ್ಲಿ ಹಾಗೂ ಮಾನವತೆಯ ವಿಷಯದಲ್ಲಿ ಅಭಿಮಾನವುಳ್ಳ ಪ್ರತಿಯೊಬ್ಬ ಧರ್ಮದರ್ಶಕರ ಆದ್ಯಕರ್ತವ್ಯ ಎಂದು ಹೇಳಬಯಸುತ್ತೇವೆ. ಅನೇಕ ಶತಮಾನಗಳ ನಂತರ ಅವರನ್ನು ಸ್ಮರಿಸಿ ಅವರ ಜಯಂತಿ ಉತ್ಸವವನ್ನು ಆಚರಿಸುವುದು ಔಪಚಾರಿಕಕ್ರಿಯೆ ಆಗಬಾರದು-ಅವರ ತತ್ವಗಳನ್ನು ನಮ್ಮ ನಿತ್ಯಜೀವನದಲ್ಲಿ ಅಳವಡಿಸಿಕೊಂಡು ಅವರು ಅಂದು ಏರಿದ ಎತ್ತರವನ್ನು ಮುಟ್ಟಲು ನಾವೆಲ್ಲರೂ ನೈಜವಾಗಿ ಪ್ರಯತ್ನಿಸಬೇಕಾಗಿದೆ.

‘ಮರ್ತ್ಯ ಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ ;
ಇಲ್ಲಿ ಸಲ್ಲವರು ಅಲ್ಲಿಯೂ ಸಲ್ಲುವರಯ್ಯ ;
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ ;
ಕೂಡಲಸಂಗಮದೇವ.

ಎಂದು ಎಲ್ಲರ ಐಹಿಕ ಜೀವನದಲ್ಲಿ ಬಸವಣ್ಣನವರು ಆಧ್ಯಾತ್ಮಕದ ಚೇತನವನ್ನು ತುಂಬಿ ಆದರ್ಶಸಮಾಜವನ್ನು ನಿರ್ಮಿಸಲು ನಮ್ಮನ್ನು ಎಚ್ಚರಿಸುವ ಉತ್ಸವವು ಬಸವಣ್ಣನವರ ಜಯಂತಿ ಆಗಲೆಂದು ಆಶಿಸುತ್ತೇವೆ.-ಶಿವಂ ಭೂಯಾತ್-

ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿರಾ ಕೇಳಿರಯ್ಯಾ ;
ಕೈಲಾಸವೆಂಬುದೊಂದು ಭೂಮಿಯೊಳಗಿರುವ ಹಾಳುಬೆಟ್ಟ
ಅಲ್ಲಿರುವ ಮುನಿಗಳೆಲ್ಲ ಜೀವಗಳ್ಳರು ;
ಅಲ್ಲಿರ್ಪ ಚಂದ್ರಶೇಖರನು ಬಹು ಎಡ್ಡ
ಇದಮೀಡಂಬರವೇಕಯ್ಯಾ ?
ಎಮ್ಮ ಪುರಾತರಿಗೆ ಸದಾಚಾರದಿಂದ ವರ್ತಿಸಿ
ಲಿಂಗಾಂಗ ಸಾಮರಸ್ಯವ ತಿಳಿದು
ನಿಮ್ಮ ಪಾದಪದ್ಮದೊಳು ಬಯಲಾದ ಪದವೆ ಕೈಲಾಸವಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ.
-ಸಿದ್ಧರಾಮ.

ಸಂಕಲ್ಪ

(ಪೂಜ್ಯ ಜಗದ್ಗುರುಗಳವರು ಮೈಸೂರು ಆಕಾಶವಾಣಿಯಲ್ಲಿ ಬಿತ್ತರಿಸಿದ ಸುಭಾಷಿತ)

ಕಾರ್ಯಾಸಕ್ತನಾದ ಮಾನವನು ಸಂಕಲ್ಪಶಕ್ತಿಯಿಂದ ಸ್ಪೂರ್ತಿಗೊಳ್ಳುತ್ತಾನೆ. ಯಾವುದೇ ಕಾರ್ಯ ಕೈಗೊಳ್ಳುವ ಮುನ್ನ ಏನೇ ಕಷ್ಟಬಂದರೂ ಅದನ್ನು ಮಾಡಿಯೇ ಮಾಡುವ ದೃಢನಿರ್ಧಾರ ಅವಶ್ಯಕ. ಈ ದೃಢನಿರ್ಧಾರವನ್ನು ಸಂಕಲ್ಪಶಕ್ತಿ (ವಿಲ್ ಪವರ್) ಎನ್ನಬಹುದು. ದೃಢಸಂಕಲ್ಪದ ಎದುರಿನಲ್ಲಿ ಪರ್ವತವು ಬಾಗುತ್ತದೆ. ಸಾಗರ ಸ್ತಂಭಿತವಾಗುತ್ತದೆ. ದೃಢಸಂಕಲ್ಪದ ಸಮಕ್ಷಮದಲ್ಲಿ ಕಠಿಣಕಾರ್ಯಗಳು ಸರಳವಾಗುತ್ತವೆ. ಮನಸ್ಸಿದ್ದಲ್ಲಿ ಮಾರ್ಗವೂ ಉಂಟು. ಅಸಾಧ್ಯವೆಂಬುದನ್ನು ನಿಘಂಟಿನಿಂದ ಹೊರತೆಗೆಯಲು ನೆಪೆÇೀಲಿಯನ್ನನು ತಿಳಿಸಿದುದನ್ನು ನಾವು ನೆನೆಯಬಹುದು. “ಅಕೂತಿಂ ದೇವಿಂ ಸುಭಗಾಂ ಪುರೋದಧೇ” ಸೌಭಾಗ್ಯಶಾಲಿನಿಯಾದ ಸಂಕಲ್ಪಶಕ್ತಿಯನ್ನು ಮುಂದಿಟ್ಟುಕೊಂಡು ಹೋಗುತ್ತೇನೆ ಎಂದು ವೇದೋ ಪಾಸಕನು ಹೇಳಿ ಅದರ ಮಹತ್ವವನ್ನು ಅರಿಯುತ್ತಾನೆ.

ಮಾನವನ ಕಾರ್ಯಾಚರಣೆಯಲ್ಲಿ ವೈವಿದ್ಯತೆ ಕಾಣುತ್ತೇವೆ. ಕೆಲವು ಕಾರ್ಯಗಳನ್ನು ಕೈಗೊಳ್ಳಲು ಕೆಲವರು ಹಿಂದೆಗೆಯುವರು, ಕೆಲವರಿಗೆ ಅರ್ಧ ಮನಸ್ಸು, ಸಂಕಲ್ಪಿತನಿಗೆ ಇದು ನಿರಾಯಾಸ. ಒಳ್ಳೆಯ ಕೆಲಸಗಳನ್ನು ಮಾಡುವುದು ಕಷ್ಟ, ಕೆಟ್ಟ ಕೆಲಸಗಳು ಸುಲಭ. ಹೊಸ ವರ್ಷದ ಪ್ರಾರಂಭದಂದು ಒಳ್ಳೆಯ ಕೆಲಸ ಮಾಡುವ ನಿರ್ಧಾರ. ಈ ನಿರ್ಧಾರ ಎಷ್ಟು ದಿನಗಳದು ನೋಡಬೇಕು. ಸಂಕಲ್ಪ ಪುರುಷನು ಏನೇ ಕಷ್ಟನಷ್ಟಗಳಿಗೊಳಗಾದರೂ ನಿರ್ಧಾರದಿಂದ ಅಚಲಿತನಾಗುವುದಿಲ್ಲ. ಸಂಕಲ್ಪ, ಪ್ರಯತ್ನ, ಸಿದ್ಧಿ-ಇವೇ ಅವನ ಮಾರ್ಗಗಳು.

ಶಾಪಕ್ಕೆ ಗುರಿಯಾಗಿ ಬೆಂದು ಬೂದಿಯಾಗಿದ್ದ ತನ್ನ ಪೂರ್ವಜರನ್ನು ಅಮರರನ್ನಾಗಿಸಲು ಭಗೀರಥನು ಆಕಾಶಗಂಗೆಯನ್ನು ಭೂಮಿಗೆ ತಂದುದು ಅವನ ಸಂಕಲ್ಪ ಶಕ್ತಿಯಿಂದ. ಭಾರತದ ಇತಿಹಾಸದಲ್ಲಿ ಚಂದ್ರಗುಪ್ತನ ಕಾಲವನ್ನು “ಸುವರ್ಣಯುಗ”ವನ್ನಾಗಿಸಿದುದು ಕೌಟಿಲ್ಯನ ಸಂಕಲ್ಪಶಕ್ತಿಯಿಂದ. ಸತ್ಯಾಚರಣೆಯ ಸಂಕಲ್ಪದಿಂದ ಗಾಂಧೀ ಮಹಾತ್ಮರಾದರು. ಸಮಾಜದ ಪಿಡುಗುಗಳನ್ನು ಹೋಗಲಾಡಿಸಿ ವೀರಶೈವ ಮತೋದ್ಧಾರಿಯಾಗಿ ಬಸವೇಶ್ವರರು ಜಗಜ್ಯೋತಿಗಳಾದುದು ಸಂಕಲ್ಪಶಕ್ತಿಯಿಂದ, ದೃಢನಿರ್ಧಾರ, ದೃಢಸಂಕಲ್ಪದಿಂದ ಏನೆಲ್ಲಾ ಸಾಧ್ಯ;

ನಂದಸ್ಯ ಕಾಮ ಪ್ರಣುದಸ್ಯ ಕಾಮಾವರ್ತಿಂ
ಯಂತು ಮನು ಯೇ ಸಪತ್ಯಾಃ,

ಸಂಕಲ್ಪವೇ, ನನ್ನ ಜ್ಞಾನಾಗ್ನಿಯೇ; ನನ್ನ ಅಂತ ಶತ್ರುಗಳನ್ನು, ನನ್ನ ಮಾರ್ಗದಲ್ಲಿರುವ ಅಡ್ಡಿ-ಆತಂಕಗಳನ್ನು ತೊಲಗಿಸು, ದೂರಮಾಡು. ಸಂಕಲ್ಪಶಕ್ತಿಯೇ ; ನನ್ನ ಶತ್ರುಗಳನ್ನು ದೂರಮಾಡು. ನನ್ನ ಸಂಕಲ್ಪಶಕ್ತಿಯನ್ನು ಜಾಗೃತಗೊಳಿಸು, ಜಾಗೃತಗೊಂಡ ಬಳಿಕ ಮಾನವ ಪ್ರಯತ್ನ ಶೀಲನಾಗಬೇಕು.

ಗತಿಸಿದುದನ್ನು ನೆನೆದು ಫಲವಿಲ್ಲ, ನಾಳೆ ಎಂಬುದು ಹಾಳು. ಇಂದು, ಈಗ ಎಚ್ಚೆತ್ತೂ ಮಾಡುವುದನ್ನು ಮಾಡಿಯೇ ಮಾಡಬೇಕು-ಇದು ಆಂಗ್ಲ ಕವಿಯೋರ್ವನ ಮಾತು.

ಹೊತ್ತಾರೆ ಎದ್ದು ಅಗ್ಗವಣಿ ಪತ್ರ ತಂದು
ಹೊತ್ತೂ ಹೋಗದ ಮುನ್ನ, ಮೃತ್ಯು ಹೊಯ್ಯದ ಮುನ್ನ
ಹೊತ್ತಗೆಲಸದ ಮಾಡು ಕೂಡಲಸಂಗನ
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು.
………………………………….. ಸಂಗನ.
ಎಂದು ಬಸವೇಶ್ವರರು ಸಹ ಎಚ್ಚರಿಸಿ ಹೇಳಿರುವುದನ್ನು ನಾವು ನೆನೆಯಬಹುದು.

ಮೇಲಾಗಿ ಸಂಕಲ್ಪಶಕ್ತಿಯು ಜಗತ್ತಿನ ಕಲ್ಯಾಣಕ್ಕೆ, ಉಪಯೋಗಕ್ಕೆ ವಿನಿಯೋಗವಾಗಬೇಕು, ನಮ್ಮ ಸಂಕಲ್ಪ ಶಿವಸಂಕಲ್ಪವಾಗಿರಬೇಕು. ಈ ಸಂಕಲ್ಪಗಳು ಶಿವಮಯವೂ, ಮಂಗಳಮಯವೂ, ಕಲ್ಯಾಣಮಯವೂ ಆಗಿರಬೇಕು. ಪ್ರತಿದಿನ ಮಲಗುವ ಮುನ್ನ ದಾಸರು ಹೇಳಿರುವಂತೆ “ಮನವ ಶೋಧಿಸಬೇಕೋ ನಿಚ್ಚ. ದಿನದಿನ ಮಾಡೂವ ಪಾಪ ಪುಣ್ಯದ ವೆಚ್ಚ” ಹೀಗೆ-ನಮ್ಮ ಅಂತರಂಗ ಪರಿಶೋಧಿಸಿ ಕೊಳ್ಳಬೇಕು, ನಂತರ ದೇವರನ್ನು ಪ್ರಾರ್ಥಿಸಬೇಕು.

ಸುಕ್ಷಾರಥಿರಶ್ವಾ ನಿವಯನ್ಮನುಷ್ಯಾನ್
ನೇನೇಯತೋಭಿ ಶುಭಿರ್ವಾಚನ ಇವ |
ಹೃತ್ಪ್ರತಿಷ್ಠಂ ಯದಚಿರಂ ಜವಿಷ್ಠಂ
ತರ್ಮೇ ಮನಃ ಶಿವಸಂಕಲ್ಪಮಸ್ತೂ |

ಚತುರನಾದ ಸಾರಥಿಯು, ವೇಗವಾಗಿ ಹೋಗುವ ಕುದುರೆಗಳನ್ನು ಲಗಾಮುಗಳ ಹಿಡಿತದಿಂದ ನಾನಾ ಮಾರ್ಗದಲ್ಲಿ ಓಡಿಸುವಂತೆ ಶೀಘ್ರ ಪ್ರವೃತ್ತಿಗಳಿಂದ ಚಲಿಸುವ *ಪ್ರಬಲಗಳನ್ನು* ಮನಸ್ಸು ತನ್ನ ಹಿಡಿತದಲ್ಲಿಟ್ಟುಕೊಳ್ಳಬಬಲ್ಲದು. ಸಂಕಲ್ಪಯುಕ ಮನಸ್ಸಿಗೆ, ಮತ್ತಿಲ್ಲ. ವೇಗಶಾಲಿಯಾಗಿರುತ್ತದೆ. ಏಕೆಂದರೆ ಈ ಮನಸ್ಸು *ಪ್ರಬಲವಾಗಿದೆ.*

ಸರ್ವರೂ ಶಿವಸಂಕಲ್ಪಯುಕ್ತರಾಗಲು ನಾವು ಬಯಸುತ್ತೇವೆ.

ಕಾಯಕ

(ಪೂಜ್ಯ ಜಗದ್ಗುರುಗಳವರು ಮೈಸೂರು ಆಕಾಶವಾಣಿಯಲ್ಲಿ ಬಿತ್ತರಿಸಿದ ಸುಭಾಷಿತ)

ಉಣಬೇಕು, ಉಡಬೇಕು, ಇಡಬೇಕು, ತೊಡಬೇಕು, ಸುಖವಾಗಿರಬೇಕು. ಈ ಬೇಕು(Wಚಿಟಿಣs) ಗಳ ಸರಮಾಲೆ ನಮ್ಮನ್ನು ದುಡಿಸುತ್ತದೆ. ಬೇಕಾದ ಎಲ್ಲರೂ ದುಡಿಯಲೇಬೇಕು. ಅವರವರು ಅವರವರಿಗಾಗಿ “ಕಾಯಕ” ಮಾಡಬೇಕು. ಇದು ಲೋಕದ ನಿಯಮ, ಪ್ರಪಂಚದ ಧರ್ಮ. ಈ “ಬೇಕು” ಸದಾ ಜಾಗೃತವಾಗಿದ್ದು, ನಮ್ಮನ್ನು ಹಗಲಿರುಳು ಎಚ್ಚರವಿರಿಸಿ, ನಿದ್ರೆ ಕನಸಿನಲ್ಲಿ ತನ್ನ ಕಾಯಕ ನಡೆಸಿದೆ. “ಕಾಯಕ” ಶರಣರ ದೃಷ್ಟಿಯಲ್ಲಿ ಮಹತ್ವವಾದುದು. ಅರಿಯದವರಿಗೆ ಯಾಂತ್ರಿಕ ಕಾರ್ಯವಾಗಿದೆ. “ಕಾಯಕ”ಕ್ಕೆ ಮಹತ್ವ ನೀಡಿದಾಗ ರಾಷ್ಟ್ರಹಿತಸಾಧನೆಯೂ, ಮುಕ್ತಿಸಾಧನೆಯೂ ಲಭಿಸುವುದು.

ಕಾಯಕದ ಅರ್ಥವೇನು? ಆಂಗ್ಲ ಕವಿಯೋರ್ವನ ಪದ್ಯದ ಸಾಲುಗಳು ಹೀಗಿವೆ.

There is no point in work
Unless it absorbs you
Like an absorbing game
If it doesn’t absorb you
If it’s never any fun,
Don’t do it

ಕೈ, ಕಾಲುಗಳು ಮೈ-ಹಣ್ಣಾಗುವಂತೆ ದುಡಿಯಬೇಕು. ಇಂದ್ರಿಯ, ಮನಸ್ಸು, ಬುದ್ಧಿ, ಸರ್ವಾಂಗ ತಮತಮಗೆ ತಕ್ಕ “ಕಾರ್ಯ”ದಲ್ಲಿ ನಿರತವಾಗಿ ದುಡಿಯಬೇಕು. ನಿರ್ಧರಿಸಿದ ಕೆಲಸವನ್ನು ತನ್ಮಯತೆಯಿಂದ ಮಾಡಬೇಕು. ಆ ಕೆಲಸ ನಿಮಗೆ ಅನಂತ ಸಂತೋಷಗೊಳಿಸಬೇಕು. ಶ್ರಮಭರಿತ, ಶುದ್ಧಹೃದಯ, ಸತ್ಯವಾದ ಕಾಯಕ ಮಾಡಬೇಕು. “ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದುದು, ಲಿಂಗಾರ್ಪಿತ”-ಇದು ಶರಣರ ಕಾಯಕ ಸೂತ್ರ.

When a man goes out into his work
He is alive like a tree in spring
He is living, not merely working

ಕಾಯಕ ಯಾಂತ್ರಿಕವಾದುದಲ್ಲ. ವಸಂತಕಾಲದಲ್ಲಿ ಕಂಡುಬರುವ ಗಿಡಮರಗಳಲ್ಲಿ ತುಂಬಿರುವ ಉತ್ಸಾಹ-ಆನಂದಗಳು “ಕಾಯಕ” ವ್ಯಕ್ತಿಯಲ್ಲಿರುತ್ತದೆ.

ಸುಗ್ರಾಸ ಭೋಜನದ ಷಡ್ರಸದ ಸುಖವು, ಲಿಂಗಪೂಜೆ ಮಾಡಿದ ಭಕ್ತಿಯ ಆನಂದ-ಕಾಯಕದ ಕೈಲಾಸ ಸುಖಮಾಡಿದವನಿಗೆ ಮಾತ್ರ ಬರುತ್ತದೆ. ಉತ್ತು, ಬಿತ್ತು ಬೆಳೆದ ಬೆಳೆಯ ರಾಶಿ ಬೆಳೆದವರಿಗೆ ವರ್ಷದ ರಾಶಿಯನ್ನೇ ತರುತ್ತದೆ. ದುಡಿದ ರಟ್ಟೆಗಳು, ಸುರಿಸಿದ ಬೆವರು, ಹಣ್ಣಾದ ಮೈಗಳಲ್ಲಿ ಮೂಡುವ ಮೋಕ್ಷವು, ದುಡಿಯದವನಿಗೆ ಹೇಗೆ ತಾನೆ ಆನಂದ ತಂದೀತು ; “ತನ್ನಾಶ್ರಯದ ರತಿಸುಖವನ್ನು ತಾನುಂಬ ಊಟವನು, ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ ? ಇದು ಶರಣರ ಪ್ರಶ್ನೆ, ರೈತನ ದುಡಿಮೆಯ ಆನಂದ ಅವನಿಗೆ. ಜಾಣತನದಿಂದ ಅವನ ಜೋಳದ ರಾಶಿಯನ್ನು ಮತ್ತೊಬ್ಬ ಒಯ್ಯುಬಹುದು. ಅವನು ಬೆಳೆದ ಜೋಳ, ಅದರ ರೊಟ್ಟಿ ಅವನಿಗೆ ಸವಿ, ಅವನ ಉದರಕ್ಕೆ ಹಿತ, ಹೃದಯಕ್ಕೆ ಸಂತೋಷ. ಈ ಅನುಭವ ದುಡಿಯದವರಿಗೆ ಹೇಗೆ ಗೊತ್ತಾದೀತು?

ಕಾಯಕವು ಸತ್ಯ, ಶುದ್ಧವಾಗಿರಬೇಕು. ಹೆಚ್ಚು ಪಡಿಗೆ ಆಶಿಸಬಾರದು. ಸುಜ್ಞಾನ, ಸದ್ಭಕ್ತಿ ಮಾರ್ಗದಲ್ಲಿ ಮಾಡಬೇಕಾದ ಕರ್ತವ್ಯವಿದು. ಕಾರ್ಯಕ್ಕೆ ಜಾತಿ, ವರ್ಣ, ಲಿಂಗ ಭೇದಗಳು ಅಡ್ಡ ಬರುವುದಿಲ್ಲ. ಅಧಿಕಾರಿ, ವ್ಯಾಪಾರಿ, ಉದ್ಯೋಗಿ, ರೈತ, ಕಾರ್ಮಿಕ, ಲೇಖಕ, ಯಾರೇ ಆಗಲಿ ದಾಸೋಹಕ್ಕೆ ಸಲ್ಲುವ ಯಾವ ಕಾಯಕದಲ್ಲಾದರೂ ತೊಡಗಬಹುದು. ಕಾಯಕದಲ್ಲಿ ಮೇಲು-ಕೀಳು ಎಂಬ ಭಾವನೆ ಉದ್ಭವಿಸುವುದಿಲ್ಲ. “ಕಾಯಕ” ಅವಶ್ಯಕ ಹಾಗೂ ಅನಿವಾರ್ಯ, ದೇವರ ಹೆಸರಿನಲ್ಲಿ ಸೋಮಾರಿಪಟ್ಟ ಕಟ್ಟಿಕೊಂಡು, ಅನ್ಯರ ಶ್ರಮದ ಫಲವನ್ನು ದೇವರಿಗೆ ಅರ್ಪಿಸಿ, ತಾನು ಉಂಡು ‘ಪ್ರಸಾದಿ’ಯಾದನೆಂದರೆ ಎಲ್ಲಿದೆ ಪ್ರಸಾದ? ಕಾಯಕದಿಂದ ಬಂದ ಪ್ರಸಾದ ಗುರು, ಲಿಂಗ, ಜಂಗಮಕ್ಕೆ ಅರ್ಪಿತ. ಅದು ಸತ್ಯ, ಶುದ್ಧ ಭಕ್ತನ ನಿತ್ಯ ದಾಸೋಹ. ನುಲಿಯ ಚಂದಯ್ಯನ ವಿಚಾರದಂತೆ ಗುರು, ಲಿಂಗ ಜಂಗಮರೂ ಕಾಯಕ ಮಾಡಬೇಕು.

ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ |
ಲಿಂಗವಾದರೂ ಕಾಯಕದಿಂದಲೇ ಶಿಲೆಯ ಕುರುಹು ಹರಿವುದು |
ಜಂಗಮವಾದರೂ ಕಾಯಕದಿಂದಲೆ ವೇಷವ ಪಾಶ ಹರಿವುದು |
ಗುರುವಾದರೂ ಚರಸೇವೆಯ ಮಾಡಬೇಕು |
ಲಿಂಗವಾದರೂ ಚರಸೇವೆಯ ಮಾಡಬೇಕು |
ಜಂಗಮವಾದರೂ ಚರಸೇವೆಯ ಮಾಡಬೇಕು |
ಇದು ಚಂದೇಶ್ವರ ಲಿಂಗದ ಅರಿವು ಕೇಳಾ ಪ್ರಭುವೆ |

ನಿತ್ಯ ಪರಿಪೂರ್ಣವಾದ, ಅಖಂಡದ ಇರವಾದ ಲಿಂಗ, ಅರಿವಾದ ಗುರು, ಆನಂದ ಸ್ವರೂಪವಾದ ಜಂಗಮಕ್ಕೆ ಕಾಯಕಷ್ಟ ಮಾಡಿ ದುಡಿದು, ದಾಸೋಹ ಮಾಡಿ, ಪ್ರಸಾದಿಯಾಗಬೇಕಾದ ಅರ್ಥದಲ್ಲಿ ಕ್ರೀಯೆ-ಜ್ಞಾನಗಳ ಹೊಂದಾಣಿಕೆ ಇದೆ. ಒಳಗೆ ಲಿಂಗದ ಅರಿವು, ಹೊರಗೆ ಲಿಂಗಕ್ಕೆಂದು ಕಾಯಕ. ಕಾಯಕದ ಮರೆಯಲ್ಲಿ ಲಿಂಗಾರ್ಥವಿದೆ, ಲಿಂಗವಿದೆ, ಕಾಯಕದಲ್ಲಿ ಮಾಡುವ ಕಾಯಕ ಅಂತರಂಗದಲ್ಲಿ ನಾಟಿ, ಮಾಡುವ ಕಾಯಕದ ಅರಿವು, ಒಳಗೂ ನಡೆಯುತ್ತಿರುತ್ತದೆ. ಹೊರಗೆ ತೋಟ ಕೃಷಿ ಮಾಡುತ್ತಿದ್ದಂತೆ, ಅಂತ್ಯರಂಗದ ಕೃಷಿಯೂ ನಡೆಯುತ್ತಿರಬೇಕು. ಪ್ರಭುವಿನ ಲಿಂಗದ ತೋಟ ಹೀಗಿದೆ.

ತನುವ ತೋಟವ ಮಾಡಿ, ಮನವ ಗುದ್ದಲಿ ಮಾಡಿ |
ಅಗಿದು ಕಳೆದನಯ್ಯಾ ಭ್ರಾಂತಿಯ ಬೇರ, ಒಡೆದು ಸಂಸಾರದ |
ಹೆಂಟೆಯು, ಬಡಿದು ಬಿತ್ತಿದೆನಯ್ಯಾ ಬ್ರಹ್ಮ ಬೀಜವ |
ಅಖಂಡ ಮಂಡಲವೆಂಬ ಬಾವಿ, ಪವನವೇ ರಾಟಳೆ |
ಸುಷುಮ್ನನಾಳದಿಂದ ಉದಕವ ತಿದ್ದಿ ಬಸವಗಳೈವರು |
ಹಸೆಗೆಡಿಸವೆಂದು, ಸಮತೆ ಸೈರಣೆಯೆಂಬ ಬೇಲಿಯನಿಕ್ಕಿ |
ಅವಾಗಳು ಈ ತೋಟದಲ್ಲಿ ಜಾಗರವಿದ್ದು |
ಸಸಿಯ ಸಲಹಿದೆನು ಕಾಣಾ ಗುಹೇಶ್ವರಾ |

ಶರಣರ ನಿರ್ಣಯದಂತೆ ಕಾಯಕ ಕೈಲಾಸ, ಕಾಯಕ ಪೂಜೆ, ಈ ಪೂಜೆ ಇಲ್ಲದೆ ಯಾವ ಪೂಜೆಯೂ ಪೂರ್ಣವಾಗಲಾರದು. “ಜ್ಞಾನವಿಲ್ಲದ ಕ್ರೀಯೆ ಜಡನು, ಕ್ರೀಯೆ ಇಲ್ಲದ ಜ್ಞಾನ ವಾಗ್‍ಜಾಲ, ಭ್ರಾಂತು. ಇದು ಕಾರಣ ಸಿದ್ಧ ಸೋಮನಾಥಲಿಂಗವ ಕೊಡುವ ಶರಣಂಗೆ ಎರಡೂ ಬೇಕು.
ಈ ಕಾಯಕ ಮಹತ್ವವನ್ನು ಅರಿತು, ಆಚರಿಸಿದರೆ ರಾಷ್ಟ್ರಹಿತ ಸಾಧನೆಯನ್ನು ಮುಕ್ತಿಮಾರ್ಗವನ್ನು ಪಡೆಯಲು ಸಾಧ್ಯವಲ್ಲವೆ.

ದಾನ

(ಪೂಜ್ಯ ಜಗದ್ಗುರುಗಳವರು ಮೈಸೂರು ಆಕಾಶವಾಣಿಯಲ್ಲಿ ಬಿತ್ತರಿಸಿದ ಸುಭಾಷಿತ)

ದಾನ ಮಾಡುವುದು ಭಾರತೀಯರ ಜೀವನದಲ್ಲಿ ಹಾಸು ಹೊಕ್ಕಾಗಿ ಬೆಳೆದು ಬಂದಿದೆ. ತನ್ನ ಶಕ್ತ್ಯಾನುಸಾರ ತನ್ನಲಿದ್ದುದನ್ನು ಅವಶ್ಯಕತೆ ಇದ್ದವನಿಗೆ ಪೂರೈಸುವುದೇ ದಾನದ ಲಕ್ಷಣ. ದಾನ ನೀಡುವವನಿಗೆ ತಾನು ನೀಡಿದೆನೆಂಬ ತೃಪ್ತಿ, ಪಡೆದವನಿಗೆ ತನ್ನ ಅವಶ್ಯಕತೆ ಪೂರೈಸಿತೆಂಬ ಸಂತೃಪ್ತಿ ಮೂಡಿದಾಗ ದಾನದ ಸಾರ್ಥಕತೆಯ ಅರಿವಾಗುವುದು. ಎಡಗೈ ಮಾಡಿದ ದಾನ ಬಲಗೈಗೆ ತಿಳಿಯಬಾರದೆಂದು ವಾಡಿಕೆಯ ಮಾತು. ದಾನ ಮಾಡುವವರು ಯಾರ ಬಲವಂತಕ್ಕಾಗಲಿ, ಮೆಚ್ಚುಗೆಗಾಗಲಿ, ಪ್ರತಿಫಲಾಪೇಕ್ಷೆಗಾಗಲಿ ದಾನ ಮಾಡುವುದಿಲ್ಲ. ದಾನ ಎಂದಾಗ ಕರ್ಣನ ಶಿಬಿ ಚಕ್ರವರ್ತಿಯ ಬಲಿಯ ನೆನಪಾಗುವುದು. ಅವರು ದಾನಮಾಡಿ ಕೀರ್ತಿಪ್ರಾಯರಾಗಿದ್ದಾರೆ.

ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಆಹಾರವೇ ಮೊದಲನೆಯದು. ಹಸಿದವನಿಗೆ ಅನ್ನ, ಬಾಯಾರಿದವನಿಗೆ ನೀರು, ಮಕ್ಕಳಿಗೆ ಹಾಲು ಬೆಣ್ಣೆಗಳ ಅವಶ್ಯಕತೆ ಇದೆ. ಬಡತನದ ಹಸಿವು ಹೆಬ್ಬಾವಿನ ಹಸಿವಿನಂತೆ, ಎಷ್ಟೇ ತಿಂದರೂ ಇನ್ನೂ ಬೇಕೆನಿಸುವುದು. ಇದಕ್ಕಾಗಿಯೇ

ಶರಣ ದೇವರದಾಸಿಮಾರ್ಯರು
ಹಸಿವೆಂಬ ಹೆಬ್ಬಾವು ಬಸಿರ ಬಂದು ಹಿಡಿದದೆ
ವಿಷವೇರಿತ್ತಯ್ಯಾ ಆಪಾದ ಮಸ್ತಕಕ್ಕೆ
ಹಸಿವಿಗನ್ನವನಿಕ್ಕಿ ವಿಷವನಿಳುಹಬಲ್ಲಡೆ
ವಸುಧೆಯೊಳಗಾತನೇ ಗಾರುಡಿಗ ಕಾಣಾ ರಾಮನಾಥ-

ಎಂದಿದ್ದಾರೆ. ಆದ್ದರಿಂದ ಒಡಲಿಗೆ ಅಗತ್ಯವಾದ ಅನ್ನ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಬೇಕು. ಧರ್ಮಾಚರಣೆಗೂ ದೇವವೇ ಮೂಲ. ಆದ್ದರಿಂದ ಅನ್ನವನ್ನು ನೀಡಬೇಕು. ಒಳ್ಳೆಯ ಮಾತನ್ನು ಆಡಬೇಕು. ಬೇರೆಯವರನ್ನು ತನ್ನಂತೆಯೇ ಭಾವಿಸಬೇಕು.

ಗೀತೆಯಲ್ಲಿ ದಾನವನ್ನು ತಾಮಸ, ರಾಜಸ, ಸಾತ್ವಿಕ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿದೆ. ದೇಶ, ಕಾಲ, ಪಾತ್ರ-ಅಪಾತ್ರಗಳನ್ನು ವಿಚಾರಿಸದೆ ಮಾಡುವ ದಾನ ತಾಮಸದಾನ. ನಾವು ಮಾಡುವ ದಾನ ಸಮಾಜದ ಬಹು ಜನಕ್ಕೆ ಉಪಕಾರವಾಗುವುದಾದರೆ ಅದು ತಾಮಸ ದಾನವೆನಿಸುತ್ತದೆ. ಪ್ರತ್ಯಪಕಾರದ ಆಸೆಯಿಂದ ಕೀರ್ತಿ ಕಾಮನೆಯಿಂದ, ಸಮಾಜದಲ್ಲಿ ನನ್ನನ್ನು ಗಣ್ಯ ಎಂದು ಭಾವಿಸಲಿ ಎಂಬ ಭಾವನೆಯಿಂದ ಮಾಡುವ ದಾನ-ರಾಜಸದಾನವೆನಿಸಿಕೊಳ್ಳುತ್ತದೆ. ಪ್ರತ್ಯುಪಕಾರದ ಆಸೆ ಇಟ್ಟುಕೊಳ್ಳದೆ, ಸಮಾಜದ ಬಹು ಜನರಿಗೆ ಉಪಯುಕ್ತವಾಗಬಹುದಾದ ಕಾರ್ಯ ಎಂದು ಅರಿತು, ದೇಶ, ಕಾಲ, ಪಾತ್ರಾದಿಗಳನ್ನು ತಿಳಿದು ಸದ್ಭಾವನೆಯಿಂದ, ವಿನಯದಿಂದ, ಮಾಡುವ ದಾನ ಸಾತ್ವಿಕ ದಾನವೆನಿಸಿಕೊಳ್ಳುತ್ತದೆ. ದಾನವು ಸ್ವಾರ್ಥವನ್ನು ನೀಗಿಸಿ ವಸ್ತುಗಳಲ್ಲಿ ಉದಿಸಬಹುದಾದ ವ್ಯಾಮೋಹವನ್ನು ನಿವಾರಿಸುತ್ತದೆ. ತ್ಯಾಗ ಬುದ್ಧಿಯನ್ನು ಬೆಳೆಸಿದಂತೆಲ್ಲ ಮನುಷ್ಯ, ದೇವರ ಕೃಪೆಗೆ ಪಾತ್ರನಾಗುತ್ತಾನೆ.

ದಾನ ಮಾಡುವುದೇ ಸ್ವಾಭಾವಿಕವಾಗಿ ಬೆಳೆದು ಬರಬೇಕು. ಮನೆಯ ವಾತಾವರಣ ಇದಕ್ಕೆ ಪೆÇೀಷಕವಾಗಿರಬೇಕು. ಕೆಲವರು ದಾನಮಾಡುವ ಸ್ವಭಾವವನ್ನು ಹೊಂದಿರುವುದಿಲ್ಲ. ಸಂಗ್ರಹ ಪ್ರವೃತ್ತಿಯನ್ನು ಹೆಚ್ಚಾಗಿ ಬೆಳೆಸಿಕೊಳ್ಳುವರು. ಇಂತಹವರು ಕೃಪಣರು, ಕೃಪಣರಾದವರು ಗತಿ ಹೀಗಾಗುತ್ತದೆ ಎಂದು ಸರ್ವಜ್ಞ ಮಾರ್ಮಿಕವಾಗಿ ನುಡಿದಿದ್ದಾನೆ.

“ಉಣ್ಣದೊಡವೆಯ ಗಳಿಸಿ ಮಣ್ಣೊಳಗೆ ಬಚ್ಚಿಟ್ಟು |
ಚೆನ್ನಾಗಿ ನೆಲವ ಸಾರಿಸಿದ ಬಾಯೊಳಗೆ |
ಮಣ್ಣುಕಾಣಯ್ಯ ಸರ್ವಜ್ಞ ||

ತಮ್ಮ ಜೀವಮಾನದಲ್ಲಿ ಸಂಪಾದಿಸಿದ ಗಳಿಕೆ ಬೇರೆಯವರ ಪಾಲಾಗುತ್ತದೆ. ಪಾಪಿಯ ಧನ ಪ್ರಾಯಶ್ಚಿತ್ತಕ್ಕೇ ಸರಿ, ದಾನಮಾಡಿ ಕೆಟ್ಟವರಿಲ್ಲ.

ದಾನಗಳಲ್ಲಿ ಹಲವು ಬಗೆಗಳುಂಟು. ಅನ್ನದಾನ, ಧನದಾನ, ಭೂದಾನ, ವಿದ್ಯಾದಾನ ಇತ್ಯಾದಿ. ಅನ್ನದಾನದಿಂದ ಪಡೆದವನಿಗೆ ತಾತ್ಕಾಲಿಕ ತೃಪ್ತಿ ಲಭಿಸುವುದು. ಧನದಾನವೂ ಅಷ್ಟೆ. ಆದರೆ ಎಲ್ಲಕ್ಕಿಂತಲೂ ಮಿಗಿಲಾದ್ದು ಜ್ಞಾನದಾನ. ಇದು ಉಪನಿಷತ್ತಿನ ವಾಣಿಯಂತೆ. ಅಸತ್ಯದಿಂದ ಸತ್ಯದ ಕಡೆಗೆ, ಕತ್ತಲೆಯಿಂದ ಬೆಳಕಿನ ಕಡೆಗೆ, ನಮ್ಮನ್ನು ಕೊಂಡೊಯ್ಯುತ್ತದೆ. ದಾನಪಡೆದವನು ಜೀವನವಿಡೀ ಇದರ ಪ್ರಯೋಜನವನ್ನು ಪಡೆಯುತ್ತಾನೆ.

ಮಾನವರೆಲ್ಲಾ ದೀನರೇ, ದೇವನೊಬ್ಬನೆ ದಾನಿ. ಶರಣದ ವಾಣಿಯಂತೆ ಇಳೆ ನಿಮ್ಮ ದಾನ, ಬೆಳೆ ನಿಮ್ಮದಾನ, ಸುಳಿದು ಸೂಸುವ ಗಾಳಿ ನಿಮ್ಮದಾನ, ಅಂದರೆ ಪ್ರಪಂಚದ ಮೇಲಣ ಸಂಪೂರ್ಣ ಒಡೆತನ ಪರಮಾತ್ಮನದು. ಅವನಿಗೆ ಸಂಬಂಧಿಸಿದ ಸ್ವತ್ತನ್ನು ಕೊಡುತ್ತೇವೆಯೇ ಹೊರತು ನಮ್ಮದನಲ್ಲ ಎಂಬ ಭಾವನೆಯನ್ನು ಕೊಡುವಾಗ ಬೆಳೆಸಿಕೊಳ್ಳಬೇಕು.

ಈ ಪ್ರಪಂಚ ಈಶನ ದೇವಸ್ಥಾನ. ಅವನಿಲ್ಲದೆಡೆಯಿಲ್ಲ, ನಮಗಾಗಿ ಆತನು ಏನನ್ನು ನೀಡಿರುವನೋ ಅದನ್ನು ನಾವು ಅನುಭವಿಸಬೇಕು, ಇತರರ ದ್ರವ್ಯಕ್ಕೆ ಆಸೆಪಡಬಾರದು. ಮಹಾದಾನಿ ಮಹಾದೇವನ ಒಲುಮೆಯಿಂದಲೇ ನಮ್ಮ ಸುಖಶಾಂತಿಯ ಜೀವನ ಲಭ್ಯ.