ಲೇಖನಗಳು

/ಲೇಖನಗಳು
ಲೇಖನಗಳು2019-07-01T17:52:29+00:00

ಅರ್ಚನ ಕೃತಿ ಕುರಿತು – ಕುವೆಂಪು

ಅನ್ನ ದಾಸೋಹ, ಜ್ಞಾನದಾಸೋಹಗಳ ಉಜ್ವಲ ಕಾಯಕದಲ್ಲಿ ತೊಡಗಿರುವ ಇಂತಹ ಶ್ರೀಗಳು ಆದರಣೀಯರೂ, ಅಭಿನಂದನೀಯರೂ ಆಗಿದ್ದಾರೆ. ಶ್ರೀ ಸ್ವಾಮೀಜಿಯವರ ಅರವತ್ತನೆ ಹುಟ್ಟುಹಬ್ಬವನ್ನು ಆಚರಿಸುವ ಸಂದರ್ಭದಲ್ಲಿ ಹೊರತರಲಿರುವ ಗ್ರಂಥವನ್ನು ನೋಡಿ ನಾನು ಆಶ್ಚರ್ಯಚಕಿತನಾಗಿದ್ದೇನೆ. ಗ್ರಂಥಪ್ರಕಟಣೆಯೂ ಮಹಾಸಾಹಸವಾಗಿರುವ ಈ ಕಾಲದಲ್ಲಿ ಸಾವಿರದ ನೂರರಷ್ಟು ಪುಟಗಳಿರುವ ಈ ಗ್ರಂಥದ ಆಕಾರಬಾಹುಳ್ಯ ಮಾತ್ರವೇ ನನ್ನ ಆಶ್ಚರ್ಯಕ್ಕೆ ಕಾರಣವಲ್ಲ; ನಾಡಿನ ಅನೇಕಾನೇಕ ಸುಪ್ರಸಿದ್ದ ವಿದ್ವಾಂಸರ ವಿದ್ವತ್ಪೂರ್ಣವಾದ ಲೇಖನಗಳನ್ನು ಸಂಗ್ರಹಿಸಲು ಸಂಪಾದಕರಾದ ಡಾ|| ಎಚ್.ಪಿ. ಮಲ್ಲೇದೇವರು ಪಟ್ಟಿರಬಹುದಾದ ಶ್ರಮವನ್ನು ನೆನೆದು, ಅವರು ಸಾಧಿಸಿರುವ ಸಿದ್ಧಿಯನ್ನು ಗಮನಿಸಿ ಕೂಡ ಆಶ್ಚರ್ಯಪಟ್ಟಿದ್ದೇನೆ. ವೀರಶೈವ ಧರ್ಮಕ್ಕೆ ಸಂಬಂಧಿಸಿದಂತೆ ಅಮೂಲ್ಯವಾದ ಲೇಖನಗಳು ಈ ಅಭಿನಂದನ ಗ್ರಂಥದಲ್ಲಿ ಸೇರಿರುವುದನ್ನು ಗಮನಿಸಿದ್ದೇನೆ. ಈ ಗ್ರಂಥವನ್ನು ಇಷ್ಟು ಅಚ್ಚುಕಟ್ಟಾಗಿ ಸಂಪಾದಿಸಿರುವ ವಿದ್ವಾಂಸಮಿತ್ರರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ಪೂಜ್ಯ ರಾಜೇಂದ್ರ ಶ್ರೀಗಳವರನ್ನು ಕುರಿತು – ಕುವೆಂಪು

ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿರಾಜೇಂದ್ರ ಸ್ವಾಮಿಗಳು ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ನಡೆಸುತ್ತಿರುವ ಚಟುವಟಿಕೆಗಳನ್ನು ಸುಮಾರು ನಲವತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಗಮನಿಸುತ್ತಾ ಬಂದಿದ್ದೇನೆ. ಸಾವಿರ ಸಾವಿರ ಸಂಖ್ಯೆಯ ಬಡ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯಗಳನ್ನು ತೆರೆದು, ಉಚಿತವಾಗಿ ಊಟ ವಸತಿಗಳನ್ನು ಕಲ್ಪಿಸಿ ಅನಕ್ಷರಸ್ಥರೋ, ಅಲ್ಪವಿದ್ಯಾವಂತರೋ ಆಗಿಯೇ ಉಳಿಯುತ್ತಿದ್ದ ಅನೇಕಾನೇಕ ಮಂದಿಗೆ ಪೂರ್ಣವಿದ್ಯಾವಂತರಾಗುವ ಅವಕಾಶವನ್ನು ಕಲ್ಪಿಸಿದ್ದ ಮಠಾಧೀಶರ ಅಗ್ರಪಂಕ್ತಿಯಲ್ಲಿದ್ದಾರೆ ಶ್ರೀ ಸುತ್ತೂರು ಸ್ವಾಮಿಗಳವರು. ಅಷ್ಟಕ್ಕೆ ನಿಲ್ಲದೆ, ನೂರಾರು ಸಂಖ್ಯೆಯಲ್ಲಿ ಶಾಲೆಕಾಲೇಜುಗಳನ್ನೂ, ತಾಂತ್ರಿಕ ಶಿಕ್ಷಣಾಲಯಗಳನ್ನೂ ತೆರೆದು ವಿದ್ಯಾಭ್ಯಾಸದ ಅವಕಾಶದ ದಿಗಂತಗಳನ್ನೂ ಅವರು ವಿಸ್ತರಿಸಿದ್ದಾರೆ.

ಶ್ರೀ ಸುತ್ತೂರು ಸ್ವಾಮಿಯವರ ಶಕ್ತಿಪೂರ್ಣವಾದ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ನೂರಾರು ವಿದ್ಯಾಸಂಸ್ಥೆಗಳು ‘ವಿಶ್ವಮಾನವ’ ರನ್ನು ಸೃಷ್ಟಿಸುವ ತೇಜೋಕೇಂದ್ರಗಳಾಗುತ್ತವೆ ಎಂಬುದು ನಮ್ಮ ಹಾರೈಕೆ. ಜಾತಿ ವರ್ಗ ಭೇದವಿಲ್ಲದೆ ಸ್ವಾಮೀಜಿಯವರು ಜನರ ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು ಅಧ್ಯಾತ್ಮದ ಹಿನ್ನೆಲೆಯಲ್ಲಿ ಲೋಕಸೇವೆಯ ಕಾರ್ಯವನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗುತ್ತಿರುವುದು ಇಂದಿನ ಇಂತಹ ಸಾಮಾಜಿಕ ಪರಿಸರದಲ್ಲಿಯೂ ಸಮಾಧಾನವನ್ನು ನೀಡುವ ವಿಷಯವಾಗಿದೆ. ಜಗತ್ತಿನ ಎಲ್ಲ ಪಾಚೀನ ಮತ್ತು ಅರ್ವಾಚೀನ ಚೇತನಗಳೂ ಈ ಮಹತ್ಕಾರ್ಯಕ್ಕೆ ಬೇಕಾದ ಶಕ್ತಿಯನ್ನು ಅವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ.

ಪರಮ ದಾಸೋಹಮೂರ್ತಿ ಶ್ರೀ ಸುತ್ತೂರು ಜಗದ್ಗುರುಗಳವರು – ಕೋ. ಚನ್ನಬಸಪ್ಪ

ನಮ್ಮೂರಿನ ಒಬ್ಬ ಮುಸ್ಲಿಂ ವಿದ್ಯಾರ್ಥಿಗೆ ಕಾಲೇಜ್ ವಿದ್ಯಾಭ್ಯಾಸ ಮಾಡಬೇಕೆಂಬ ಹಂಬಲ. ಆದರೆ, ಬಳ್ಳಾರಿಯಂತಾ ನಗರದಲ್ಲಿದ್ದು ಕಾಲೇಜ್ ಓದುವಷ್ಟು ತ್ರಾಣ ಅವನಿಗಿರಲಿಲ್ಲ. ಆ ಕೋಮಿನವರನ್ನು ಸೇರಿಸಿಕೊಳ್ಳುವ ಉಚಿತ ಪ್ರಸಾದನಿಲಯ ಬಳ್ಳಾರಿಯಲ್ಲಿರಲಿಲ್ಲ.
“ಹ್ಯಾಗೆ ಮಾಡ್ಲಿ ಸಾರ್?’’ ಎಂದು ದೈನ್ಯದಿಂದ ಕೇಳಿದ.
“ಮೈಸೂರಿಗೆ ಹೋಗ್ತೀಯ?” ಎಂದು ಕೇಳಿದೆ.
“ಅಲ್ಲಿ ನನಗೆ ಊಟ-ವಸತಿ ಯಾರು ಕೊಡ್ತಾರೆ ಸಾರ್?”
“ಹೋಗೋದಾದ್ರೆ ಹೇಳು. ಸುತ್ತೂರು ಜಗದ್ಗುರುಗಳಿಗೆ ಒಂದು ಕಾಗದ ಕೊಡ್ತೀನಿ. ತಗೊಂಡುಹೋಗಿ ಕೊಡು …”
“ಅವರು ನಮ್ಮ ಜಾತಿಯವರಿಗೆ ಸೇರಿಸಿಕೊಳ್ತಾರೆಯೇ ಸಾರ್.”
“ನಿನಗೆ ಯಾಕೆ? ಬೇಕಾದ್ರೆ ಹೇಳು. ಒಂದು ಕಾಗದ ಕೊಡ್ತೀನಿ. ಅದನ್ನ ಕೊಟ್ಟು ಬುದ್ದಿಗಳ ಮುಂದೆ ಉದ್ದಕ್ಕೆ ಅಡ್ಡಬೀಳು. ಕೈಕಟ್ಟಿಕೊಂಡು ನಿಂತುಕೋ; ಅಷ್ಟೇ ಸಾಕು.”
ಅವನು ಒಪ್ಪಿಕೊಂಡ. ಕಾಗದ ಕೊಟ್ಟೆ. ಮೈಸೂರಿಗೆ ಹೋಗಿ, ಶ್ರೀ ಶ್ರೀ ಶಿವರಾತ್ರೀಶ್ವರ ಮಹಾಸ್ವಾಮಿಜಿಗಳಿಗೆ ಅದನ್ನು ಮುಟ್ಟಿಸಿ ನಾನು ಹೇಳಿದಂತೆ ಮಾಡಿದ. ಅವನಿಗೆ ಉಚಿತ ಊಟ-ವಸತಿಯ ಏರ್ಪಾಟನ್ನು ಶ್ರೀಗಳವರು ತಮ್ಮ ಪ್ರಸಾದನಿಲಯದಲ್ಲಿ ಮಾಡಿಕೊಟ್ಟರು. ಅವನು ಬಿ.ಎ. ತನಕ ಅಲ್ಲಿದ್ದು ಡಿಗ್ರಿ ಪಡೆದುಕೊಂಡ. ಕನ್ನಡದಲ್ಲಿ ಒಳ್ಳೆ ಬರಹಗಾರನಾದ.

ಹೀಗೆ ಶ್ರೀ ಶ್ರೀ ಸುತ್ತೂರು ಶಿವರಾತ್ರೀಶ್ವರ ರಾಜೇಂದ್ರ ಮಹಾಸ್ವಾಮಿಜಿಗಳವರ ಉಚಿತ ಪ್ರಸಾದನಿಲಯದಲ್ಲಿದ್ದು, ಓದಿಕೊಂಡು ಮುಂದಕ್ಕೆ ಬಂದ ಬಳ್ಳಾರಿ ಜಿಲ್ಲೆಯ ವಿದ್ಯಾರ್ಥಿಗಳ ಸಂಖ್ಯೆಯೇ, ಈ ಇಪ್ಪತ್ತು ವರ್ಷಗಳಲ್ಲಿ ಒಂದು ಸಾವಿರದಷ್ಟು ಆಗಿರಬಹುದು. ಅಂದಮೇಲೆ ಹಳೇ ಮೈಸೂರು ಸೀಮೆಯಲ್ಲಿ ಕಳೆದ ನಾಲ್ವತ್ತು ವರ್ಷಗಳಿಂದ ಅವರ ಆಶ್ರಯದಲ್ಲಿ ಓದಿ ಬೆಳೆದವರ ಸಂಖ್ಯೆ ಲಕ್ಷಕ್ಕೂ ಮೀರಿದ್ದರೆ ಆಶ್ಚರ್ಯವಿಲ್ಲ.

ಹಾಗೆ ಮುಂದಕ್ಕೆ ಬಂದವರಲ್ಲಿ ಕುಲ ಹದಿನೆಂಟು ಜಾತಿಯ ಜನÀರಿದ್ದಾರೆ. ನನಗೆ ಗೊತ್ತಿರುವಂತೆ ಹರಿಜನರು, ಗೊಲ್ಲರು, ಬೇಡರು, ಬೆಸ್ತರು, ಕುರುಬರು, ಕುಂಚಿಟಿಗರು ಕೂಡಾ ಅವರ ಹಾಸ್ಟೆಲ್ಲುಗಳಲ್ಲಿ ಆಶ್ರಯ ಪಡೆದು ವಿದ್ಯಾಭ್ಯಾಸ ಮಾಡಿದ್ದಾರೆ. ಒಕ್ಕಲಿಗರು ಗಣನೀಯವಾದ ಸಂಖ್ಯೆಯಲ್ಲ್ಲಿದ್ದಾರೆ. ಬ್ರಾಹ್ಮಣರೂ ಇದ್ದಾರೆಂದು ನಾನು ಕೇಳಿದ್ದೇನೆ.

ಹೀಗೆ ಎಲ್ಲಾ ಕೋಮಿನವರಿಗೂ ಆಶ್ರಯ ಕೊಟ್ಟು ತಮ್ಮ ಕೃಪಾಶೀರ್ವಾದಗಳಿಂದ ಬಡವರನ್ನು, ವಿಶೇಷ ಸಂದರ್ಭಗಳಲ್ಲಿ ಬಲ್ಲದರನ್ನೂ ಕೂಡಾ ಮೇಲಕ್ಕೆತ್ತಿಕೊಂಡ ಪರಮ ದಾಸೋಹಮೂರ್ತಿಗಳು ಶ್ರೀ ಶಿವರಾತ್ರೀಶ್ವರ ಜಗದ್ಗುರುಗಳು.

ಕರ್ನಾಟಕದಲ್ಲಿ ಉಚಿತ ಪ್ರಸಾದನಿಲಯಗಳನ್ನು ನಡೆಸುವುದೇನೂ ಅಪರೂಪದ ಸಂಗತಿಯಲ್ಲ. ಒಂದು “ಉದ್ಯೋಗ”ವೇ ಅಗಿಬಿಟ್ಟಿದೆ. ಕೆಲವು ಸ್ವಾಮಿಗಳಿಗೆ! ಅದರಲ್ಲೂ ಸ್ವಾತಂತ್ರ್ಯಾನಂತರವಂತೂ “ಸಮಾಜ ಸೇವೆ”ಯ ಸೋಗಿನ ಸಂಘ, ಸಂಸ್ಥೆ, ವ್ಯಕ್ತಿಗಳಿಗಂತೂ ಮಿತಿಯೇ ಇಲ್ಲ! ಆದಕಾರಣ ಶ್ರೀ ಶ್ರೀ ಸುತ್ತೂರು ಜಗದ್ಗುರುಗಳವರು ಹಾಸ್ಟೆಲ್ಲುಗಳನ್ನು ನಡೆಸುತ್ತಾರೆಂದರೆ, ಅವುಗಳನ್ನು ಕಾಣದವರು ಅದೇನು ದೊಡ್ಡ ಮಾತು ಎಂದರೂ ಎನ್ನಬಹುದು.

ಆದರೆ, ಶ್ರೀ ಸುತ್ತೂರು ಜಗದ್ಗುರುಗಳ ಪ್ರಸಾದನಿಲಯಗಳು ಎಲ್ಲ ನಿಲಯಗಳಂತೆ ಅಲ್ಲ. ನಾನು ಅಂಥ ಒಂದು ಪ್ರಸಾದನಿಲಯದಲ್ಲೇ ಇದ್ದು ಬದುಕಿದವನಾÀದ್ದರಿಂದ ಸ್ವಾನುಭವದಿಂದ ಹೇಳುವ ಮಾತು ಇದು. 1940-41ರಲ್ಲಿ ಒಮ್ಮೆ ಮೈಸೂರಿಗೆ ಹೋದಾಗ ಶ್ರೀ ಗ. ಸ. ಹಾಲಪ್ಪನವರ ಪರಿಚಯವಾಯಿತು. ಅವರು ಆಗ ಆನರ್ಸ್ ಕ್ಲಾಸ್‍ನಲ್ಲಿದ್ದರು. ಶ್ರೀ ಸುತ್ತೂರು ಹಾಸ್ಟೆಲ್ಲಿನಲ್ಲಿದ್ದರು. ಕಾಲೇಜಿನಿಂದ ಅವರಿ ರೂಮಿಗೆ ಕೆರೆದೊಯ್ದರು. ಅದು ದೊಡ್ಡ ಬಂಗಲೆಯ ಮಹಡಿಯ ಮೇಲೆ ಒಂದು ಪ್ರತ್ಯೇಕ ಸಿಂಗಲ್ ರೋಮ್; ಒಳ್ಳೆ ಪೀಠೋಪಕರಣಗಳು. ಅದನ್ನು ನೋಡಿ ಉಚಿತ ಪ್ರಸಾದನಿಲಯವೆಂಬ ನಂಬುಗೆ ನನಗಾಗಲಿಲ್ಲ. ಇನ್ನೂ ಆಶ್ಚರ್ಯ ನನಗಾಗಿ ಕಾದಿತ್ತು. ಆನರ್ಸ್ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾದ ವಸತಿ; ಪ್ರತ್ಯೇಕವಾದ ಊಟದ ವ್ಯವಸ್ಥೆಯಾಗಿತ್ತು! ಜೊತೆಗೆ ಆ ದಿನ ಅದೇ ಹಾಸ್ಟೆಲಿನಲ್ಲಿ ನನಗೋ ಪ್ರಸಾದ ವ್ಯವಸ್ಥೆಯಾಗಿತ್ತು. ಸೊಗಸಾದ ಪುಷ್ಕಳ ಭೋಜನ! ಇಂಥ ಅನುಕುಲ ನಾನಿದ್ದ ಹಾಸ್ಟೆಲಿನಲಿ ಇರಲಿಲ್ಲ. ಮಜ್ಜಿಗೆಯ ನೀರು ಹಾಕಿದರೆ ನಿದ್ದೆ ಬರುತ್ತದೆ ಎಂದು ಬರೀ ಅನ್ನ, ಸಾರು, ಹುಣಸೆ ತೊಕ್ಕು ಉಂಡು ಶಾಲೆಗೆ ಹೋದವರು ನಾವು!! ಆಗ ಭಯಂಕರ ಯುದ್ಧಕಾಲ; ಪಡಿತರ ಪದ್ದತಿ ಜಾರಿಯಲ್ಲಿತ್ತು. ಆಗಲೂ ಸುಮಾರು ಇನ್ನೂರು-ಮುನ್ನೂರು ವಿದ್ಯಾರ್ಥಿಗಳಿಗೆ ಊಟ-ವಸತಿಯ ಏರ್ಪಾಡು ಮಾಡಿದ್ದರು ಶ್ರೀಗಳವರು. ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಹೆಚ್ಚಾಗುತ್ತಾ ಬಂದು 1951ರಲ್ಲಿ ಸುಮಾರು ಹನ್ನೊಂದು ನೂರು ವಿದ್ಯಾರ್ಥಿಗಳಿದ್ದರೆಂದು ನನ್ನ ನೆನಪು. 1961ರಲ್ಲಿ ಸುಮಾರು ಹದಿನೇಳು ನೂರು ವಿದ್ಯಾರ್ಥಿಗಳಿದ್ದರಂತೆ. ಈಗ ಹತ್ತಿರ ಹತ್ತಿರ ಎರಡು ಸಾವಿರ ವಿದ್ಯಾರ್ಥಿಗಳಾದರೂ ಇರಬೇಕು.

“ಇದನ್ನೆಲ್ಲಾ ಬುದ್ದಿಗಳು ಹೇಗೆ ತೂಗಿಸುತ್ತಾರೆ ಹಾಲಪ್ಪನವರೇ” ಎಂದು ಕೇಳಿದೆ.
“ಅದೇ ಪವಾಡದ ಸಂಗತಿ! ಒಂದೊಂದು ದಿನ ಸ್ಟೋರ್ ರೂಮ್ ಖಾಲಿಯಾಗಿರುತ್ತದೆ. ಮರುದಿನ ಏನು ಮಾಡೋದು? ಅಂತ ನಾವು ಚಿಂತೆ ಮಾಡುವಾಗ, ಬುದ್ಧಿಗಳು ಕಾರು ಹಾಕಿಕೊಂಡು ಹೊರಡುತ್ತಾರೆ. ಆಗ ರಾತ್ರಿ ಒಂಬತ್ತೋ, ಹತ್ತೋ ಬೆಳಕು ಹರಿಯೋದರ ಒಳಗಾಗಿ ಲಾರಿಗಟ್ಟಲೆ ಭತ್ತ ಬಂದು ಬೀಳ್ತದೆ! ತಮ್ಮ ಜೋಳಿಗೆ ತುಂಬಾ ನೋಟು ತರ್ತಾರೆ! ಒಂದೊಂದು ಚೀಲ ಮೆಣಸು ತರಿಸ್ತಾರೆ. ಸಕ್ಕರೆ, ಗೋಧಿ ರಾಶಿರಾಶಿ!!”

ನಾನು ಕಂಡಹಾಗೆ ಮೂವತ್ತು ವರ್ಷಗಳಿಂದ ಈ ನಿತ್ಯದಾಸೋಹ ಅಂದರೆ ನಿತ್ಯ ಪವಾಡ ನಡೆಯುತ್ತಿದೆ! ಅಷ್ಟು ದವಸ-ಧಾನ್ಯ ಸಾಮಗ್ರಿ, ಹಣ ಎಲ್ಲಂದ ಬರುತ್ತದೆ? ಹಿಂದಿನ ಕಾಲದ ಸ್ವಾಮಿಗಳಂತೆ ನೀರನ್ನು ತುಪ್ಪ ಮಾಡಿ, ಬೆತ್ತ ಮುಟ್ಟಿಸಿ ಅನ್ನದ ಕೊಪ್ಪರಿಹೆಯನ್ನು ಅಕ್ಷಯಪಾತ್ರೆ ಮಾಡಿ ಇಷ್ಟೆಲ್ಲಾ ನಡೆಸುತ್ತಾರೆ ಎಂದೇನೂ ಅಲ್ಲ. ಈಗಿರುವ ಶ್ರೀ ಶ್ರೀಗಳವರು ಪೀಠದ ಉಸ್ತುವಾರಿಯನ್ನು ವಹಿಸಿಕೊಂಡ ಮೇಲೆ ಅವರೊಡನೆ ನಿಕಟ ಪರಿಚಯ ಬೆಳೆದ ಮೇಲೆ ಈ ಬೃಹತ್ ಅನ್ನದಾಸೋಹದ ರಹಸ್ಯವೇನೆಂಬುದನ್ನು ನಾನು ತಿಳಿದುಕೊಂಡಿದ್ದೇನೆ.

“ನಮ್ಮ ಮಠಕ್ಕೆ ಎಲ್ಲಾ ಜಾತಿಯ ಜನರೂ ನಡೆದುಕೊಳ್ಳುತ್ತಾರೆ. ಎಲ್ಲರೂ ಉದಾರವಾಗಿ ಕಾಣಿಕೆ ಕೊಡುತ್ತಾರೆ. ನಾವು ಕೇಳಬೇಕೆಂದೇನೂ ಇಲ್ಲ. ಮಠಕ್ಕಾಗಿ ಪ್ರತಿಯೊಂದು ಕುಟುಂಬವೂ ಇಂತಿಷ್ಟು ನಿಧಿ ತೆಗೆದಿಡುತ್ತಾರೆ. ಅವರೆ ಗಾಡಿಯಲ್ಲಿ ಹೇರಿಕೊಂಡು ಬಂದು ಕೊಡುತ್ತಾರೆ! ಲಿಂಗಾಯಿತರಲ್ಲದವರೇ ಬಹುಸಂಖ್ಯೆಯಲ್ಲಿರುವ ಈ ಪ್ರದೇಶದಲ್ಲಿ ಅವರೇ ಬಹುಸಂಖ್ಯಾತ ಶಿಷ್ಯರು ಇರುವುದು ಸಹಜ” ಎಂದು ಶ್ರೀಗಳವರೊಮ್ಮೆ ಅಪ್ಪಣೆಕೊಡಿಸಿದರು.

ಜಾತೀಯ ಭಾವನೆ, ಅದರಲ್ಲೂ ಜಾತಿ ದ್ವೇಷದ ಜ್ವಾಲೆ ಹತ್ತಿ ಉರಿಯುತ್ತಿರುವ ಈ ಕಾಲದಲ್ಲೂ ಒಂದು ಮತ ಜಗದ್ಗುರುಗಳ ಬಗ್ಗೆ ಇಷ್ಟೊಂದು ಭಕ್ತಿ-ವಿಶ್ವಾಸಗಳು ಎಲ್ಲ ಮತದವರಿಗೂ ಇನ್ನೂ ಉಳಿದಿರುವುದು ಆಶ್ಚರ್ಯದ ಸಂಗತಿಯೇ ಸರಿ ! ಅದಕ್ಕೆ ಏನು ಕಾರಣವಿರಬಹುದು?
ಯಾವುದೋ ಮಾತು ಬಂದಾಗ, ಶ್ರೀಗಳವರು ಅಪ್ಪಣೆಕೊಡಿಸಿದರು: “ನಮಗೆ ಸನ್ಯಾಸಿಗಳಿಗೆ ಯಾವ ಜಾತಿಯ ಬಂಧನವೂ ಇಲ್ಲ. ಯಾರ ಹೊಟ್ಟೆಯಲ್ಲಿ ಹುಟ್ಟಿದ್ದೇವೆಯೋ ಅವರೆ ನಮಗೆ ಸಂಬಂಧವಿಲ್ಲದವರಾಗಿ ಹೋಗುತ್ತಾರೆ! ಅವರ ಮನೆತನಕ್ಕೆ ಹೊರಗಾಗಿಬಿಡುತ್ತೇವೆ. ನಮ್ಮ ಜೀವನವೇ ಬೇರೆಯಾಗಿಬಿಡುತ್ತದೆ. ‘ಪೂರ್ವಾಶ್ರಮದ ತಂದೆ-ತಾಯಿಗಳು’ ಎಂದೇ ಹೇಳುತ್ತೇವೆ. ಹೀಗಿರುವಾಗ ನಮಗೆ ಎಲ್ಲರೂ ಒಂದೇ! ಎಲ್ಲರನ್ನೂ ಒಂದೇ ರೀತಿಯಾಗಿ ಕಾಣದವರು ಸನ್ಯಾಸಿಗಳಾಗಲಾರರು. ನಮಗೆ ಎಲ್ಲರೂ ಬೇಕು, ನಾವು ಎಲ್ಲರಿಗೂ ಬೇಕು!”

ಈ ಮಾತು ಕೇವಲ ಪುಸ್ತಕದ ಬದನೇಕಾಯಿ ಅಲ್ಲವೆಂಬುದನ್ನು ನಾನು ಪ್ರತ್ಯಕ್ಷವಾಗಿ ಕಂಡಿದ್ದೇನೆ. ಪ್ರತ್ಯಕ್ಷವಾಗಿ ಕಂಡರೂ ಪರಾಂಬರಿಸಿದ್ದೇನೆ. ಎರಡು ವರ್ಷಗಳ ಕೆಳಗೆ ಕುಲಪತಿ ಪ್ರೊ. ದೇ. ಜವರೇಗೌಡರೂ, ನಾನೂ ಶ್ರೀ ಶಿವರಾತ್ರೀಶ್ವರ ಜಗದ್ಗುರುಗಳ ಜಯಂತಿ ಉತ್ಸವದಲ್ಲಿ ಪಾಲ್ಗೋಳ್ಳುವ ಸಂದರ್ಭ ಬಂದುತ್ತು. ಸಭಾಮಂದಿರಕ್ಕೆ ಹೋಗುವಾಗ ಪ್ರೊ. ಗೌಡರು : “ಯಾರು ಏನೇ ಹೇಳಲಿ ನನಗೆ ದಿಟವಾಗಿದೆ. ಶ್ರೀಗಳವರಿಗೆ ಸಂಕುಚಿತ ಜಾತೀಯ ದೃಷ್ಟಿ ಇಲ್ಲ. ನಿಮಗೆ ಗೊತ್ತೋ ಇಲ್ಲವೋ. ನಾನು ವೈಸ್ ಛಾನ್ಸಲರ್ ಆಗಬೇಕೆಂದು ಅವರು ಹರಸಿದ್ದೊಂದೇ ಅಲ್ಲದೆ . . . ಆದ ಮೇಲೆ ಎಷ್ಟು ಆತ್ಮೀಯವಾಗಿ ಕಂಡು ಗೌರವಿಸಿದರು!! . . . . ಅವರು ಹೇಳಿದ ಇನ್ನೂ ಅನೇಕ ವಿಚಾರಗಳನ್ನು ಇಲ್ಲಿ ಪ್ರಕಟಿಸುವುದು ಸರಿಯಾಗಲಾರದು. ಆದರೆ ಒಂದನ್ನು ಹೇಳಿದರೆ ತಪ್ಪಾಗದೆಂದು ಕಾಣುತ್ತದೆ :
ಮಠಕ್ಕೆ ಹೋದರೆ ‘ಪ್ರಸಾದ ತೆಗೆದುಕೊಳ್ಳಿ’ ಎನ್ನುತ್ತಾರೆ. ‘ಇಲ್ಲ’ ಎಂದು ಹೇಳುವ ಮನಸ್ಸಾಗುವುದಿಲ್ಲ… ಇಷ್ಟೇ ಹೇಳಿದರೆ ಸಾಕು.

ಶಿಕ್ಷಣಕ್ಕೆ ದಾಸೋಹವೇ ಬುನಾದಿ
ಶ್ರೀ ಸ್ವಾಮಿಗಳಿಗೆ ತಾವು ಕೈಕೊಂಡಿರುವ ದಾಸೋಹ ಕಾಯಕದ ಬಗ್ಗೆ ಯಾವ ಸಂಶಯವೂ ಇಲ್ಲ. ಶಿಕ್ಷಣ-ನಿಜವಾದ ಶಿಕ್ಷಣವೇ ನಮ್ಮ ಜನಾಂಗದ ಪುನರುತ್ಥಾನದ ಏಕಮೇವ ಮಾರ್ಗ ಎಂಬುದು ಶ್ರೀಗಳವರ ಬೀಜಮಂತ್ರ. ಆ ಶಿಕ್ಷಣ ಕೇವಲ ಶಾಲಾ-ಕಾಲೇಜುಗಳಲ್ಲಿ ಕಲಿಸುವ ಅಕ್ಷರವಿದ್ಯೆಯಲ್ಲ ; ಹಾಗೆ ಹೇಳಬೇಕೆಂದರೆ ಈಗ ಏನನ್ನು ವಿದ್ಯೆ ಎಂದು ಕಲಿಯುತ್ತದ್ದಾರೆಯೋ, ಅದು ಕೇವಲ ಓದು ಅಷ್ಟೆ. ಅದರಿಂದ ಪ್ರಯೋಜನಕ್ಕಂತಲೂ ಅಪಾಯವೇ ಅಪಾರವಾಗಿದೆ. ಆದ್ದರಿಂದಲೇ ಈಗ ಓದು ಕಲಿತವರಲ್ಲೇ ಇರಬಾರದ ಲಕ್ಷಣಗಳು ಹೇರಳವಾಗಿ ಮನೆ ಮಾಡಿವೆ. ಬಹುಶಃ ಈ ಅಂಶವನ್ನು ಶ್ರೀಗಳವರು ಬಹು ಹಿಂದೆಯೇ ಗಮನಿಸಿ, ನಮ್ಮ ಯುವಕರ ಮನಸ್ಸು ಒಳ್ಳೆಯ ಚಿಂತನ ಮಾಡಲಿ ಎಂದು ಧಾರ್ಮಿಕ ಗ್ರಂಥ ಪ್ರಕಾಶನವನ್ನು ಹೇರಳವಾಗಿ ಮಾಡುತ್ತಲಿದ್ದಾರೆ. ಆಚಾರ್ಯರ, ಧರ್ಮವಿಭೂತಿಗಳ ಜಯಂತಿಗಳನ್ನು ವಿಶೇಷವಾಗಿ ಆಚರಣೆ ಮಾಡಿಸುತ್ತಾರೆ. ಅದರಲ್ಲೂ ಮೈಸೂರು ಶಹರ ಮತ್ತು ಜಿಲ್ಲೆಯಲ್ಲಿ ಬಸವೇಶ್ವರರ ಜೀವನ ದರ್ಶನಗಳನ್ನು ಜನ-ಮನದಲ್ಲಿ ಹರಡಲು ಅಪಾರ ಶ್ರಮಿಸಿದ್ದಾರೆ.

“ಧರ್ಮ ಬಡವರ ಅಫೀಮು” ಎಂಬುದು ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರ ಮತ್ತು ರಾಜನೀತಿಜ್ಞರ ನಂಬುಗೆ ಆಗಿರಬಹುದು. ಆದರೆ ನಮ್ಮ ದೇಶದಲ್ಲಿ ಧರ್ಮ ಬಿಟ್ಟು ಅನ್ಯ ದಾರಿಯೇ ಇಲ್ಲ. ಧರ್ಮ ನಮ್ಮ ಜನರ ಜೀವದ ಉಸಿರು. ಈಗ ದೊಡ್ಡ ರೋಗ (ಲೆಪ್ರಸಿ)ದಿಂದ ನರಳುತ್ತರುವ ನಮ್ಮ ಸಮಾಜ ಜೀವನಕ್ಕೆ ಒಂದೇ ಒಂದು ಸಿದ್ಧೌಷಧ ಧರ್ಮ, (ಮೂಢನಂಬುಗೆ; ಒಣ ಆಚಾರಗಳಲ್ಲ) ಎಂಬುದನ್ನು ಎಷ್ಟು ಬೇಗ ತಿಳಿದಷ್ಟು ಅಷ್ಟೂ ಮೇಲು.

ಈಗಿನ ಶ್ರೀಗಳವರ ಪ್ರಥಮ ಪರಿಚಯ ಆದದ್ದು 1950-51ರಲ್ಲಿ. ನನ್ನ ಮಿತ್ರರೊಬ್ಬರಿಗೆ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಆನರ್ಸ್ ಕ್ಲಾಸ್‍ನಲ್ಲಿ ಸೀಟು ಬೇಕೆಂದು ಪ್ರಯತ್ನಿಸಲು ಬಂದಿದ್ದೆ. ಆಗ ಉಚಿತ ಪ್ರಸಾದಕ್ಕೆ ಏರ್ಪಾಟುಮಾಡಲೆಂದು ಶ್ರೀ ಶ್ರೀಗಳವರನ್ನು ಕಂಡು ಬಿನ್ನವಿಸಿಕೊಂಡೆ. ಅವರು ಆಶ್ರಯ ಕೊಡಲೊಪ್ಪಿ ವಿದ್ಯಾರ್ಥಿಯನ್ನು ಕಳಿಸಿಕೊಡಲು ತಿಳಿಸಿದರು. ಅಲ್ಲಿಂದ ಇಲ್ಲಿಗೆ ದಿನ ಕಳೆದಂತೆಲ್ಲಾ ಪರಿಚಯ ನಿಕಟವಾಗಿದೆ. ಎಷ್ಟು ಹತ್ತಿರದಿಂದ ನೋಡಿದರೆ ಅಷ್ಟು ಗಾಢವಾಗಿದೆ. ಅವರ ಬಗ್ಗೆ ನನ್ನ ಗೌರವ ಮತ್ತು ಪೂಜ್ಯಬುದ್ದಿ, ದೂರದ ಗುಡ್ಡ ಕಣ್ಣಿಗೆ ನುಣ್ಣಗೆ. ಹತ್ತಿರ ಬಂದು ನೋಡಿದರೆ, ತಗ್ಗುದಿನ್ನೆ. ಗುಂಡುಬಂಡೆ, ಮರಗಿಡ-ಪೊದೆ. ಹಾವು, ಚೇಳು, ಹುಲಿ… ಏನೆಲ್ಲಾ ಗೊತ್ತಾಗುತ್ತದೆ. ಹಾಗೆಯೇ ದೂರದಿಂದ ನೋಡಿದ ಜನರ ಬಗೆಗೂ ಹತ್ತಿರ ಬಂದಂತೆಲ್ಲಾ ಅವರ ಹುಳುಕು ತಾನೇತಾನಾಗಿ ತನ್ನ ವಿಕಾರ, ಕರಾಳ ಮುಖವನ್ನು ತೋರಿಸುತ್ತದೆ. ಆದರೆ ಶ್ರೀ ಸುತ್ತೂರು ಜಗದ್ಗುರುಗಳವರನ್ನು ಎಷ್ಟು ಹತ್ತಿರದಿಂದ ನೋಡಿದರೂ ಅಪರಂಜಿಯಂತೆ, ಸ್ಫಟಿಕದ ಶಲಾಕೆಯಂತೆ ಪರಿಶುದ್ದ ಮತ್ತು ಜಾಜ್ವಲ್ಯಮಾನವಾಗಿ ಕಾಣುತ್ತಾರೆ!

ಕೆಲವು ಜನರು, ಅದರಲ್ಲೂ ಸ್ವಾಮಿಗಳು ತಮ್ಮ ದೊಡ್ಡಸ್ತಿಕೆಯನ್ನು ಸ್ಥಾಪಿಸಲು ಏನೇನೋ ಆಡಂಬರ-ಉಡಿಗೆಯಲ್ಲಿ-ತೊಡಿಗೆಯಲ್ಲಿ, ಬಿರುದುಬಾವಲಿಗಳಲ್ಲಿ, ವಸ್ತು-ವಾಹನಗಳಲ್ಲಿ ಇಟ್ಟುಕೊಂಡಿರುತ್ತಾರೆ. ಒಳಗಿಲ್ಲದ ಸಂಪತ್ತನ್ನು ಹೊರಗಿನಿಂದ ಭರ್ತಿಮಾಡಿಕೊಳ್ಳುವ ಹವಣಿಕೆ ಇದು ಎಂದು ಅಂಥವರ ಬಗ್ಗೆ ಗುಮಾನಿಯ ದೃಷ್ಟಿ ನನಗೆ. ಸ್ವಾಮಿಗಳನ್ನು ಯಾರು ಬೇಕಾದರೂ, ಯಾವಾಗ ಬೇಕಾದರೂ (ಅವರ ಲಿಂಗಪೂಜಾ ಸಮಯದ ಹೊರತು) ಕಾಣಬಹುದು. ಯಾವ ವಿಷಯವನ್ನಾದರೂ-ಸಾಮಾನ್ಯ ಮತ್ತು ಅಸಾಮಾನ್ಯ-ಸರಳವಾಗಿ ಮಾತನಾಡಬಹುದು. ಯಾವುದೂ ಹಳ್ಳಿಯಲ್ಲಿ ಯಾರೋ ಸಾಮಾನ್ಯ ಜನರಲ್ಲಿ ವಿರಸವಾಗಿದೆ. ಅದನ್ನು ಸರಿಪಡಿಸಬೇಕು ಎಂಬುದರಿಂದ ಹಿಡಿದು, ನಮ್ಮ ನಾಡಿನ ಆಧ್ಯಾತ್ಮಿಕ ಪ್ರವೃತ್ತಿಯ ವೃದ್ಧಿಯನ್ನು ಸಾಧಿಸುವ ಬಗೆ ಹೇಗೆ ಎಂಬುದರವರೆಗೆ ಸರಳವಾಗಿ ಮಾತನಾಡಬಹುದು. ಸ್ವಾಮಿಗಳಿ ಯಾವ ಬಗೆಯ ಆಧಿಕ್ಯವನ್ನೂ ತೋರಿಸಿಕೊಳ್ಳದೆ ಎಲ್ಲರೊಡನೆಯೂ ಸಲೀಸಾಗಿ ಮತನಾಡುತ್ತಾರೆ. ಅವರ ಈ ಸರಳತೆಯೇ ಅವರ ಈ ಹಿಮೆಗೆ ಮುಖ್ಯ ಕಾರಣ-ನನ್ನ ದೃಷ್ಟಿಯಲ್ಲಿ.

ದೇಶ ಉಳಿದರೆ ಧರ್ಮ
ಕೆಲವರು ಸ್ವಾಮಿಗಳು ಭಾವಿಸುತ್ತಾರೆ, ತಮ್ಮ ವೇಷ-ಭೂಷಣ ತಮ್ಮ ಸ್ಥಾನಕ್ಕೆ-ಜಗದ್ಗುರು ಪೀಠಕ್ಕೆ ಅನಿವಾರ್ಯವಾದ ಅಲಂಕಾರ ಎಂಬುದಾಗಿ. ಈ ಮಾನದಂಡದಿಂದ ನೋಡಿದರೆ ಶ್ರೀ ಸುತ್ತೂರು ಜಗದ್ಗುರುಗಳೇ ಅಲ್ಲ. ಯಾಕೆಂದರೆ ಅವರು ಖಾದೀ ಉತ್ತರೀಯವನ್ನಲ್ಲದೆ ಬೇರೆ ಬಟ್ಟೆಯನ್ನೇ ಧರಿಸುವುದಿಲ್ಲ. ರೇಶಿಮೆ, ಜರತಾರಿ, ಕಿರೀಟ ಇದೆಲ್ಲ ವಿಶಿಷ್ಟ ಸಮಯಕ್ಕೆ ಬೇಕಾದ ಲಾಂಛನವೇ ಹೊರತು ಅವು ಅವರದಲ್ಲ.

ಶ್ರೀ ಸ್ವಾಮಿಗಳು ಖಾದೀ ಧರಿಸುತ್ತಿರುವುದು ಇಂದು ನಿನ್ನೆಯಿಂದಲ್ಲ. ಸ್ವಾತಂತ್ರ್ಯಕ್ಕೆ ಪೂರ್ವದಲ್ಲೇ ಖಾದೀ ಬಟ್ಟೆಗೆ ಕಾವಿಯನ್ನು ಅದ್ದಿ ಉಡುತ್ತಿದ್ದರು. ಅವರ ರಾಷ್ಟ್ರಪ್ರೇಮ, ದೈವಭಕ್ತಿಯಷ್ಟೇ ಪ್ರಾಮುಖ್ಯ ಅವರ ಜೀವನದಲ್ಲಿ. ಅದಕ್ಕೊಂದು ನಿದರ್ಶನ ನೆನಪಾಗುತ್ತದೆ. 1962ರಲ್ಲಿ ನಮ್ಮ ದೇಶದ ಮೇಲೆ ಚೀನೀ ದಾಳಿ ನಡೆದಾಗ, ದೇಶದಾದ್ಯಂತ ಚಿನ್ನದ ಸಂಗ್ರಹ ನಡೆಯಿತು. ಅಂದಿನ ಮೈಸೂರು ಮುಖ್ಯಮಂತ್ರಿಗಳು ಒಂದು ಸಾರ್ವಜನಿಕ ಸಭೆಯಲ್ಲಿ ಚಿನ್ನದ ದೇಣಿಗೆಗಾಗಿ ಮನವಿ ಮಾಡಿದಾಗ, ಶ್ರೀ ಸುತ್ತೂರು ಶ್ರೀಗಳವರು ತಮ್ಮ ಚಿನ್ನದ ಲಿಂಗದ ಕರಡಿಗೆಯನ್ನು ತೆಗೆದು ದಾನ ಮಾಡಿದರು! ವೀರಶೈವ ಸಿದ್ದಾಂತದ ಪ್ರಕಾರ ಲಿಂಗವೇ ಪ್ರಾಣ-ಲಿಂಗದವರಿಗೆ. ಅದನ್ನು ಎಷ್ಟು ಜತನವಾಗಿ ಅಂಗದ ಮೇಲೆ ಧರಿಸುತ್ತಾರೆ, ಕಾದಿಡುತ್ತಾರ ಎಂದರೆ ತಮ್ಮ ಪ್ರಾಣಕ್ಕಿಂತಲೂ ಅದನ್ನು ಅಧಿಕವಾಗಿ ನೋಡುತ್ತಾರೆ. ಲಿಂಗದ ಕಾಯಕವೆಂದರೆ ಭಕ್ತನ ಕಾಯಕವೆದ್ದಂತೆ. ಇಂಥ ಪವಿತ್ರ ನಿಧಿಯನ್ನು ಸ್ವಾಮಿಗಳು ಬಹಿರಂಗ ಸಭೆÀಯಲ್ಲಿ ಬಿಚ್ಚಿಕೊಟ್ಟರು!

ಶ್ರೀಗಳವರ ಈ ನಡತೆಯನ್ನು ನೆನೆದಾಗಲೆಲ್ಲ ಅದೇ ಕಾಲದಲ್ಲಿ ಬಂಗಾರವನ್ನು ಯಥೇಚ್ಛವಾಗಿ ವಸೂಲಿ ಮಾಡಿಕೊಂಡು “ಬಂಗಾರಸ್ವಾಮಿ”ಗಳಾದವರ ವಿಚಾರ ನೆನಪಾಗುತ್ತದೆ.

ಸ್ವಲ್ಪ ದಿನಗಳಲ್ಲಿ ಒಮ್ಮೆ ಮೈಸೂರಿಗೆ ಹೋದಾಗ ಈ ಘಟನೆ ಬಗ್ಗೆ ಮಾತು ಬಂತು. ಸ್ವಾಮಿ ಹೇಳಿದರು, “ರಾಜಕಾರಣಿಗಳಿಗೆ ಇದು ದೇಶದ ರಾಜಕೀಯ ಸ್ವಾತಂತ್ರ್ಯದ ಪ್ರಶ್ನೆ. ವ್ಯಾಪಾರಿಗಳಿಗೆ ತಮ್ಮ ಆರ್ಥಿಕಾಭಿವೃದ್ಧಿಯ ಚಿಂತೆ. ಒಬ್ಬೊಬ್ಬರಿಗೆ ಒಂದೊಂದು ದೃಷ್ಟಿಯಿಂದ ಈ ಸಮಸ್ಯೆ ಮಹತ್ವದ್ದಾಗಿದೆ. ಆದರೆ ನಮ್ಮ ದೃಷ್ಟಿಯಲ್ಲಿ ಇದು ನಮ್ಮ ಆರ್ಷೇಯ ಧರ್ಮದ ಅಳಿವು-ಉಳಿವಿನ ಪ್ರಶ್ನೆ. ಈ ದೇಶ ಉಳೀದರೆ ನಮ್ಮ ಧರ್ಮ ಉಳಿದೀತು. ಇಲ್ಲದಿದ್ದರೆ, ನಮ್ಮ ಗುಡಿಗೋಪುರಗಳು, ಮಠಮಾನ್ಯಗಳು, ಫ್ಯಾಕ್ಟರಿಗಳೋ, ಶಸ್ತ್ರಾಗಾರಗಳೋ ಆಗಿಹೋಗುತ್ತವೆ. ಜೀವ ಇದ್ದರೆ ದೇಹಕ್ಕೆ ಬೆಲೆ. ಹಾಗೆಯೇ ನಮ್ಮ ರಾಷ್ಟ್ರದ ಜೀವ ಧರ್ಮ. ಧರ್ಮ ಉಳಿದರೆ ನಮ್ಮ ದೇಶ ಬದುಕುತ್ತದೆ. ಈ ದಾಳಿ ಬೇರೆಯವರಿಗಿಂತ ಹೆಚ್ಚಾಗಿ ನಮಗೆ ಸಂಬಂಧಿಸಿದ ಪ್ರಶ್ನೆ…”

ಈ ಸಂದರ್ಭದಲ್ಲೇ 1950ರಲ್ಲೇ ಶ್ರೀ ಅರವಿಂದರು ಹೇಳಿದ ಮಾತನ್ನು ನೆನೆಸಿಕೊಳ್ಳಬಹುದು. ಕಮ್ಯುನಿಸ್ಟ್ ಚೀನಾದಿಂದ ಭರತಖಂಡಕ್ಕೆ ಬಂದೊದಗಬಹುದಾದ ವಿಪತ್ತನ್ನು ಅವರು ಸ್ಪಷ್ಟವಾಗಿ ಮನಗಂಡಿದ್ದರು. ಚೀನಾ ದೇಶ, ಟಿಬೆಟ್ ಅಕ್ರಮಣಮಾಡಿ ಆ ತರುವಾಯ ಅಸ್ಸಾಂ ಮಾರ್ಗವಾಗಿ ಭಾರತದ ಮೇಲೆ ದಾಳಿ ನಡೆಸಬಹುದೆಂದು ಅವರು ಮಹಾಸಮಾಧಿ ಹೊಂದುವುದಕ್ಕೆ ನಾಲ್ಕೆ ತಿಂಗಳ ಮೊದಲು, ಭವಿಷ್ಯ ನುಡಿದಿದ್ದರು. ಅದು ಆಗಬಾರದೆಂದೂ ಅದನ್ನು ಪ್ರಬಲವಾಗಿ ವಿರೋಧಿಸುವ ಪ್ರಜಾಸತ್ತಾತ್ಮಕ ಶಕ್ತಿಗಳು ಒಂದಾಗಬೇಕೆಂದೂ ಹೇಳಿದ್ದರು.

ಸ್ವಾಮಿಗಳ ಆ ಮಾತುಗಳನ್ನು ಕೇಳಿ ನಾನು: “ಈ ವಿಪತ್ತನ್ನು ನಿವಾರಿಸಲು ನಮಗೆ ಫ್ಯಾಕ್ಟರಿಗಳೂ ಶಸ್ತ್ರಾಗಾರಗಳೂ ಬೇಕಲ್ಲ ಬುದ್ಧಿ? ನಮ್ಮ ಮಠಗಳೆಲ್ಲ ಈಗ ಫ್ಯಾಕ್ಟರಿಗಳಾಗುವುದೇ ಮೇಲೆಂದು ಕಾಣುತ್ತದೆ” ಎಂದೆ.

“ಈ ಆಪತ್ಕಾಲದಲ್ಲಿ-ಬಂದ ಈ ಸಂಕಟ ಪರಿಹಾರಕ್ಕಾಗಿ ಹಾಗೆ ಮಾಡಿದರೂ ತಪ್ಪಲ್ಲ. ಆದರೆ ಮಠಗಳ ಬದಲು ಫ್ಯಾಕ್ಟರಿಗಳಾಗಬೇಕಾಗಿಲ್ಲ. ಮಠಗಳ ಜೊತೆಗೇ ಫ್ಯಾಕ್ಟರಿಗಳಾಗಲೀ ಬೇಕು. ಫ್ಯಾಕ್ಟರಿಗಳು ಚೆನ್ನಾಗಿ ಕೆಲಸ ಮಾಡಲು, ಕೆಲಸ ಮಾಡಿ ಸಂಪತ್ತು ಸಮೃದ್ಧಿಯಾದ ಮೇಲೆ ಶಾಂತಿ, ನೆಮ್ಮದಿ ನೆಲೆಸಲು ಮಠಗಳು ಅಗತ್ಯವಾಗಿ ಬೇಕು. ಮಠಗಳಿಲ್ಲದ ಫ್ಯಾಕ್ಟರಿಗಳ ದೇಶ ಕೇವಲ ದೈತ್ಯ ಶಕ್ತಿ” ಎಂದರು.

ಈ ಮಾತು ಎಷ್ಟು ಸತ್ಯ ಎಂಬುದರ ಅರಿವು ನಮ್ಮ ರಾಷ್ಟ್ರಜೀವನದ ಸೂತ್ರಗಳನ್ನು ಹಿಡಿದುಕೊಂಡಿರುವ ವ್ಯಕ್ತಿ-ಶಕ್ತಿಗಳಿಗೆ ಎಷ್ಟು ಬೇಗ ಆದರೆ ಅಷ್ಟು ಒಳಿತು. ಆಗಲೇ ಈ ದೇಶಕ್ಕೆ ತನ್ಮೂಲಕ ಲೋಕಕ್ಕೆ ಶಾಂತಿ ಎಂಬುದು ಬುದ್ಧಿಮಟ್ಟದ ಜನಕ್ಕೆ ತಿಳಿಯಬೇಕಾಗಿದೆ.

ವಿದ್ವತ್ ಪಕ್ಷಪಾತಿಗಳು
ಶ್ರೀಗಳು, ಆಧ್ಯಾತ್ಮಮಯ ವ್ಯಾವಹಾರಿಕ ಜೀವನವೇ ನಿಜವಾದ ಬಾಳು ಎಂಬುದನ್ನು ಗಮನಿಸಿಯೇ ಸಂಸ್ಕೃತ ಪಾಠಶಾಲೆ, ಹೈಸ್ಕೂಲು, ಕಾಲೇಜುಗಳ ಜೊತೆಗೆ ಎಂಜಿನಿಯರಿಂಗ್ ಕಾಲೇಜನ್ನು ಕೂಡಾ ನಡೆಸುತ್ತಿದ್ದಾರೆ. ಉಪಾಧ್ಯಾಯರ ತರಬೇತಿ ಕಾಲೇಜನ್ನೂ ತೆರೆದಿದ್ದಾರೆ. ಅವರ ಶಿಕ್ಷಣ ಸಂಸ್ಥೆಗಳ ವಿಸ್ತಾರ ಒಂದು ವಿಶ್ವವಿದ್ಯಾನಿಲಯದ ಬೃಹತ್ ಪ್ರಮಾಣಕ್ಕೆ ಹಬ್ಬಿದೆ. ಒಂದೇ ಒಂದು ಮಠ ಇಷ್ಟೊಂದು ಸಂಸ್ಥೆಗಳನ್ನು ನಡೆಸುವುದು ಆಶ್ಚರ್ಯ ಮತ್ತು ಅಪರೂಪ.

ಶ್ರೀಗಳವರ ಆಸಕ್ತಿ ಪ್ರಥಮತಃ ಆಧ್ಯಾತ್ಮ. ಅವರ ಆಧ್ಯಾತ್ಮ ಇಹಲೋಕವಿಮುಖವಾದುದಲ್ಲ. “ಸ್ವರ್ಗಲೋಕ, ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರೋ” ಎಂಬುದು ಅವರ ಮೂಲ ಮಂತ್ರ. ಆದ್ದರಿಂದಲೇ ಜೀವನದ ಎಲ್ಲ ಕ್ಷೇತ್ರಕ್ಕೂ ಅವರು ಸಮಾನ ಮಹತ್ವ ಮತ್ತು ಬೆಲೆ ಕೊಡುತ್ತಾರೆ. ಅವರ ಆಸಕ್ತಿ ಸಾಹಿತ್ಯಕ್ಷೇತ್ರಕ್ಕೂ ವ್ಯಾಪಿಸಿದೆ. ಆದ್ದರಿಂದಲೇ ವಿದ್ವಾಂಸರಿಗೆ ಮುಕ್ತಹಸ್ತದಿಂದ ನೆರವೀಯುತ್ತಾರೆ. ಬರಹಗಾರ ಗ್ರಂಥಗಳನ್ನು ಪ್ರಕಟಿಸುವುದು, ಅವರ ಕೃತಿರಚನಾಶಕ್ತಿಗೆ ಗೊಬ್ಬರ, ನೀರು ಹಾಕಿದಂತೆ, ಶ್ರೀ ಶಿವರಾಶ್ರೀಶ್ವರ ಗ್ರಂಥಮಾಲೆಯಿಂದ ಪ್ರಕಟವಾದ ಅನೇಕ ಕೃತಿರತ್ನಗಳು ಸ್ವಾಮೀಜಿಯ ವಿದ್ವತ್-ಪಕ್ಷಪಾತಕ್ಕೆ ಉತ್ತಮ ನಿದರ್ಶನ.

ಶ್ರೀಗಳು ವಿದ್ವತ್‍ಪಕ್ಷಪಾತಿಗಳಾಗಿರುವಂತೆ ಸಹೃದಯರೂ ಆಗಿದ್ದಾರೆ. ಎರಡು ವರ್ಷಗಳ ಹಿಂದೆ ಶ್ರೀ ನಿಜಗುಣ ಶಿವಯೋಗಿಗಳ ಜಯಂತಿ ಉತ್ಸವಕ್ಕೆ ಅವರೊಡನೆ ಹೋಗಿದ್ದೆ. ಶಂಭುಲಿಂಗನ ಬೆಟ್ಟದ ಬುಡದಲ್ಲಿ ಏರ್ಪಡಿಸಿದ್ದ ಆ ಸಮಾರಂಭಕ್ಕೆ ಸುತ್ತಮುತ್ತ ಗ್ರಾಮಗಳಿಂದ ಕನಿಷ್ಠ ಎರಡು-ಮೂರು ಸಾವಿರ ಜನರಾದರೂ ಸೇರಿದ್ದರು. ಅಂದು ಶ್ರೀಗಳವರು ನಿಜಗುಣಶಿವಯೋಗಿಗಳ ಬಗ್ಗೆ ತಿಳಿಯಾಗಿ ಮಾತನಾಡಿದ್ದನ್ನು ನೋಡಿ ಜನ ತಲೆದೂಗಿದರು. ಅಂದರೆ ಆಡಿದ ಮಾತು ಜನಗಳಿಗೆ ತಿಳಿಯಿತು ಎಂದರ್ಥ. ಕೆಲವು ಸ್ವಾಮಿಗಳು, ಸಂಸ್ಕೃತ ವಾಕ್ಯಗಳನ್ನು, ಶ್ಲೋಕಗಳನ್ನು ಉದ್ಧರಿಸದೆ ಭಾಷಣ ಮಾಡುವುದೇ ಇಲ್ಲ. ಎದುರಿಗೆ ಕುಳಿತವರು ಯಾರು? ಅವರಿಗೆ ಏನು ಬೇಕು? ಅರ್ಥವಾಯಿತೇ ಇಲ್ಲವೇ ಎಂಬುದು ಅವರಿಗೆ ಮುಖ್ಯವಲ್ಲ. ತಮ ಪಾಂಡಿತ್ಯ ಪ್ರದರ್ಶನವೇ ಅಲ್ಲಿ ಅವರಿಗೆ ಮುಖ್ಯ! ಅವರ ಮಾತು ಕೇಳಿ ಜನ ನಿಬ್ಬೆರಗಾಗುತ್ತಾರೆ ! ಅದರಿಂದ ಮಬ್ಬು ಮುಚ್ಚುತ್ತದೆ. ಆದರೆ ಬೆಳಕು ಮಾತ್ರ ಇಲ್ಲ. ಶ್ರೀ ಸುತ್ತೂರು ಶ್ರೀಗಳವರು ಅಂಥ ಮಬ್ಬು ಕವಿಸುವ ಕೆಲಸ ಮಾಡುವುದೇ ಇಲ್ಲ.

ಸರಳ ಸ್ವಭಾವ
ಶ್ರೀ ಶ್ರೀಗಳವರಲ್ಲಿ ನನಗೆ ತೋರಿದ ಅತಿ ಮುಖ್ಯವಾದ ಅಂಶ ಎಂದರೆ ಅವರ ಸರಳತೆ ಎಲ್ಲ ಅರ್ಥದಲ್ಲೂ ಸರಳತೆ. ಅವರ ಈ ಸರಳ ಸ್ವಭಾವ ಎಲ್ಲಿಯವರೆಗೆ ಹೋಗುತ್ತದೆ ಎಂದರೆ, ಅವರೇ ಪಾಶೆ ಬೀಳುತ್ತಾರೆ! ಯಾರೋ ಒಬ್ಬ ಸ್ವಾಮಿಗಳು ಬಂದರು. ಅವರು ಬಹಳ ಮಾತನಾಡುತ್ತಿದ್ದರು. ಅವರಿಗೆ ಆಶ್ರಯ ಕೊಟ್ಟರು. ಆದರೆ ಆಮೇಲೆ ತಿಳಿಯಿತು. ಅವರು ನಕಲಿ ಸ್ವಾಮಿಗಳು ಎಂದು. “ಆದರೆ ಏನು ಮಾಡುವಂತಿದೆ? ಅವರ ನಿಜಬಣ್ಣ ಬಯಲಾದ ಮೇಲೆಯೂ ಅವರ ಬಗ್ಗೆ ನನಗೆ ದ್ವೇಷವಿಲ್ಲವಲ್ಲ? ಇದೇ ನನಗೆ ಆಶ್ಚರ್ಯದ ಸಂಗತಿ.”

ಹೀಗೆ ಶ್ರೀಗಳವರ ಔದಾರ್ಯದ ದುರುಪಯೋಗ ಪಡೆಯುವವರು ಅನೇಕ ಜನ, ಅನೇಕ ಬಗೆಯಾಗಿ. ಒಮ್ಮೆ ದಸರಾ ಕಾಲದಲ್ಲಿ ಬಳ್ಳಾರಿ ಜಿಲ್ಲೆಯವನೆಂದು ಹೇಳಿಕೊಂಡರು, ಯಾರೋ ತನ್ನಲ್ಲಿದ್ದ ಹಣವನ್ನೆಲ್ಲಾ ಮೋಸದಿಂದ ಸುಲಿಗೆ ಮಾಡಿದರೆಂದು ಸಣ್ಣ ಮುಖ ಮಾಡಿಕೊಂಡು ಬುದ್ಧಿಗಳ ಮುಂದೆ ಕೈಮುಗಿದು ನಿಂತನಂತೆ. ಅವನಿಗೆ ಅರವತ್ತೋ ಎಪ್ಪತ್ತೋ ರೂಪಾಯಿ ಕೊಟ್ಟರು. ಊರಿಗೆ ಹೋಗಿ ವಾಪಸ್ಸು ಕಳಿಸುವುದಾಗಿ ಹೇಳಿದ ಮನುಷ್ಯನ ಪತ್ತೆಯೇ ಇಲ್ಲ.

“ನಿಮಗೇನಾದರೂ ಅವನು ಗೊತ್ತೇ” ಎಂದು ನನ್ನ ಕೇಳಿದರು.

“ದಸರಾದೊಂಬಿಗೆ ಬರುವ ಜನ ಎಷ್ಟೋ ; ಹೇಗೆ ಗೊತ್ತಾಗಬೇಕು ?” ಎಂದೆ.

“ಆಯ್ತು ಬಿಡಿ” ಎಂದು ಮುಗುಳ್ನಗೆ ನಕ್ಕರು. ಅವರಿಗೆ ಗೊತ್ತಾಗಿರಬೇಕು, ಪಾಶೆ ಬಿದ್ದಿದ್ದೇವೆ ತಾವು ಎಂದು ತಮ್ಮ ಮುಗ್ಧ ಸ್ವಭಾವದಿಂದ ತಮಗೇ ನಗೆ ಬಂದಿರಬೇಕು!

ಅವರ ಸರಳ ಸ್ವಭಾವದ ಮಾದರಿಗೆ ಒಂದು ಘಟನೆ ನೆನಪಾಗುತ್ತದೆ. ನಾನು ಶಿವಮೊಗ್ಗೆಯಲ್ಲಿದ್ದಾಗ. ಒಂದು ಸಂಜೆ ಆರೂವರೆ, ಏಳರ ಸಮಯದಲ್ಲಿ ಡಾ. ಎಚ್. ತಿಪ್ಪೇರುದ್ರಸ್ವಾಮಿಗಳು ಶಿವಮೊಗ್ಗ ಊರೊಳಗಿಂದ ಫೆÇೀನ್ ಮಾಡಿ;

“ಸ್ವಾಮೀಜಿ ಮೈಸೂರಿಗೆ ಹೊರಟಿದ್ದಾರೆ. ರಾತ್ರಿ ಹನ್ನೊಂದಕ್ಕೆ ಮಠಕ್ಕೆ ತಲುಪುತ್ತಾರೆ-ಅಂತ ಮೈಸೂರಿಗೆ ಫೆÇೀನ್ ಮೂಲಕ ತಿಳಿಸಬೇಕಂತೆ” ಎಂದರು.

“ಅಷ್ಟು ಹೊತ್ತಿನಲ್ಲಿ ಯಾಕೆ ಪ್ರಯಾಣ ಮಾಡಬೇಕು. ಬುದ್ಧಿಗಳು ಇಲ್ಲೇ ಲಿಂಗಪೂಜೆ ತೀರಿಸಿಕೊಂಡು ಹೋಗಬಹುದಲ್ಲಾ” ಎಂದೆ ನಾನು.
“ಇಲ್ಲ, ಈ ರಾತ್ರಿಯೇ ಮೈಸೂರು ತಲುಪಬೇಕಂತೆ.”

“ಸ್ವಾಮೀಜಿ ಎಲ್ಲಿದ್ದಾರೆ ? ನಾನು ಬಂದು ಮಾತನಾಡುತ್ತೇನೆ.”

“ಇಲ್ಲಿಯೇ ಕಾರಿನಲ್ಲಿದ್ದಾರೆ.” “ನಾನು ಬರಲೇ ?”

“ಕೇಳಿ ನೋಡುತ್ತೇನೆ ತಡೆಯಿರಿ.”

ನಾನು ಫೆÇೀನ್ ಹಿಡಿದು ನಿಂತುಕೊಂಡೆ, ಎರಡು ನಿಮಿಷಗಳಲ್ಲಿ ಆ ತುದಿಯಿಂದ ಸ್ವಾಮಿಗಳೇ ಮಾತನಾಡ ತೊಡಗಿದರು. ನನಗೆ ಆಶ್ಚರ್ಯವಾಯಿತು. ಅವರಿಗಿರುವ ಅವಸರವನ್ನು ಅವರು ಹೇಳಿದರು. ನಾನು ರಾತ್ರಿ ಪ್ರಯಾಣ ಮಾಡುವ ತೊಂದರೆಯನ್ನು ಹೇಳಬೇಕಾದಷ್ಟು ಮಟ್ಟಿಗೆ ಹೇಳಿ : “ಈ ರಾತ್ರಿ ಇಲ್ಲೇ ತಂಗಿಬಿಡಿ ಬುದ್ಧಿ : ನಾನು ಬಂದು ಬಿನ್ನವಿಸುತ್ತೇನೆ” ಎಂದೆ.

“ಬೇಡಿ, ಬಂದೇ ಕರೆಯಬೇಕೆಂದೇನೂ ಇಲ್ಲ. ನಿಮ್ಮ ಆಗ್ರಹ ಹಾಗಿದ್ದರೆ ಈ ರಾತ್ರಿ ಇದ್ದೇ ಬೆಳಿಗ್ಗೆ ಹೊರಡುತ್ತೇವೆ” ಎಂದು ಶ್ರೀಗಳು ಮನೆಗೆ ಬಂದೇಬಿಟ್ಟರು! ಸುತ್ತೂರು ವೀರಸಿಂಹಾಸನಾಧೀಶ್ವರರಾದ ಶ್ರೀ ಶ್ರೀ ಶಿವರಾತ್ರಿರಾಜೇಂದ್ರ ಮಹಾಸ್ವಾಮಿಗಳು ಹೀಗೆ ಭಿನ್ನವಿಸಿದೊಡನೆ ಬಿಜಯಂಗೈಯುವುದು ಆಶ್ಚರ್ಯಕರವಲ್ಲವೇ?

ಒಮ್ಮೆ ಅವರು ಮೈಸೂರಿನಲ್ಲಿ ಹೇಳಿದರು : “ಅಷ್ಟೇಕೆ? ನಮ್ಮ ಶಿಷ್ಯರಲ್ಲಿ ಬಹಳ ಬಡವರು ಇದಾರೆ. ಲಿಂಗಾಯತರಲ್ಲದವರೂ ಇದ್ದಾರೆ. ಅವರು ಭಿನ್ನಹ ಮಾಡುತ್ತಾರೆ. ಅವರಲ್ಲಿಗೂ ಹೋಗುತ್ತೇವೆ. ನಮ್ಮ ಪೂಜೆಗಾಗಿ ತಮ್ಮ ಬಡನಿವಾಸದಲ್ಲಿ ಒಂದು ಕಡೆ ಪ್ರತ್ಯೇಕ ಸ್ಥಳ ಏರ್ಪಡಿಸುತ್ತಾರೆ. ಅಲ್ಲಿ ಅವರ ಪ್ರೀತ್ಯರ್ಥವಾಗಿ, ಶ್ರೇಯೋಭಿವೃದ್ಧಿಗಾಗಿ ಪೂಜೆ ತೀರಿಸಿಕೊಂಡು ಬರುತ್ತೇವೆ”-ಎಂಬುದಾಗಿ.

ಇವರನ್ನು ಜಗದ್ಗುರುಗಳು ಎಂಬುದಕ್ಕಿಂತ ಜನತಾ ಗುರುಗಳೆಂದು ಕರೆದರೆ ಹೆಚ್ಚು ಉಚಿತವೆಂದು ಕಾಣುತ್ತದೆ. ಇಂಥ ಸ್ವಾಮಿಗಳಿಂದ ಜನತಾ ಕಲ್ಯಾಣವಾಗಿ. ಭೂಕೈಲಾಸ ಸ್ಥಾಪನೆ ಆದಾಗಲೇ ಈ ಲೋಕಕ್ಕೆ ಕಲ್ಯಾಣ !

ಮಡಕೆಯ ಮಾಡುವಂತೆ ಮಣ್ಣೇ ಮೊದಲು.
ತೊಡಿಗೆಯ ಮಾಡುವಂತೆ ಹೊನ್ನೇ ಮೊದಲು.
ಶಿವಪಥವನರುವಡೆ ಗುರುಪಥವೇ ಮೊದಲು.
ಕೂಡಲ ಸಂಗಮದೇವರನರುವಡೆ
ಶರಣರ ಸಂಗವೇ ಮೊದಲು.
– ಬಸವಣ್ಣ