ರಾಜೇಂದ್ರ ನುಡಿ ನಮನ

/ರಾಜೇಂದ್ರ ನುಡಿ ನಮನ
ರಾಜೇಂದ್ರ ನುಡಿ ನಮನ2019-07-01T17:52:29+00:00

ಗುರುನಮನದಿಂದ ಆಯ್ದ ಕವನಗಳು

ಸುತ್ತೂರು

-ಡಾ. ಸಾ. ಶಿ. ಮರಳಯ್ಯ

ಬೆಳ್ಳಿ ಬೆಟ್ಟದ ಬೆಳಕೆ ಹೊಳೆಯಾಗಿ ಹರಿದಿಲ್ಲಿ
ಮುಡುಗಟ್ಟಿ ನಿಂದಿಹುದು ತೀರ್ಥವಾಗಿ

ಕಾಮಧೇನುವೆ ಒಲಿದು ಸೊರೆಬಿಟ್ಟು ಸುರಿದಾಗ
ಹಾಲು ಹೊಳೆಯಾಗಿಹುದು ಕಪಿಲೆಯಾಗಿ

ಗಗನದಲಿ ತೆಂಗುಗಳು ಜಾಗರವನಾಡುವುವು
ಬೆಳುದಿಂಗಳಿರುಕಿನಲಿ ಬೆಳಕ ತೂರಿ

ನೆಲದಲ್ಲಿ ಹೊಂಬಾಳೆ ಹುಡಿತುಂಬಿ ಬರೆದಿಹುದು
ರಂಗವಲ್ಲಿಯನಿಲ್ಲಿ ಬೀಸಿ ಚವರಿ

ಸುತ್ತೂರ ಸುತ್ತೆಲ್ಲ ಮುತ್ತು ಮಣಿಗಳ ಮಾಲೆ
ಬತ್ತ ಬಂಗಾರಕ್ಕೆ ಕುಣಿವ ಇಚ್ಛೆ

ಕೆತ್ತೆತ್ತಿ ಕೇಳಿದರೆ ಮುಗಿಲು ವiತಾಡುವುದು
ಎತ್ತೆತ್ತಲೂ ಹಚ್ಚ ಹಸಿರು ಪಚ್ಚೆ
ವೀರಸಿಂಹಾಸನದ ಕರುಣೆ ಕಣ್ತೆರೆದಂತೆ
ಮಲ್ಲಿಗೆಯು ಚಲ್ಲಿಹುದು ಬಯಲಿನಲ್ಲಿ

ಶಿವರಾತ್ರಿ ಗುರುವರನ ತಪವೆ ಹಣ್ಣಾದಂತೆ
ತೃಪ್ತಿ ಮಲಗಿದೆ ಇಲ್ಲಿ ಗದ್ದುಗೆಯಲಿ

ಇದುವೆ ಪೂಜ್ಯದ ಪುಂಜ ಅನುಭಾವಿಗಳ ಬೆಳಸು
ಶಿವರಾತ್ರಿ ರಾಜೇಂದ್ರನಿರುವ ನಾಡು

ಸಾಸಲಿನ ಶಿವ-ಮರುಳಗೊಲಿದ ಶ್ರೀ ಪ್ರಭುರಾಜ
ಯೋಗಿವರ್ಯನ ನಿಜದ ನಿಲುಮೆ ಬೀಡು

ಎದ್ದೇಳು ಬೆಳಗಾಯಿತು

– ಡಾ. ಬಿ. ನಂ. ಚಂದ್ರಯ್ಯ

ಎಚ್ಚರವು ಎಚ್ಚರವು ಗುರುರಾಜ ರಾಜೇಂದ್ರ
ರಾಜ ರಾಜೇಂದ್ರ ರಾಜಗುರುತಿಲಕ ರಾಜೇಂದ್ರ
ಏಳೇಳು ಎದ್ದೇಳು ಬೆಳಗಾಯಿತು
ಏಳೇಳು ಶಿವಯೋಗಿ ರಾಜೇಂದ್ರ ಬೆಳಗಾಯಿತು

ಅಂಗುಲಿಯ ಉಂಗುರುವು ಮೀಸಲಾಯಿತ್ತು
ತಾನವಗೆ ಅರಿವಿನಾಕಾಂಕ್ಷೆ ಹೊತ್ತವಗೆ
ಸುಜ್ಞಾನ ಭುಭುಕ್ಷುವಿಗೆ ಲೋಕತಾರಕನಾದ
ಸುತ್ತೂರು ರಾಜೇಂದ್ರ ಎದ್ದೇಳು ಬೆಳಗಾಯಿತು

ರೋಗಿಗಳ ನಿರೋಗಗೊಳಿಸುವ ಕೈಂಕರ್ಯ ಕೈಕೊಂಡ
ಭವರೋಗ ವೈದ್ಯ ನೀ ರಾಜೇಂದ್ರ
ಅನುಕಂಪೆಯವತಾರಿ ಭವಲೋಕದಾಧಾರಿ
ಶಿವಯೋಗಿ ರಾಜೇಂದ್ರ ಎದ್ದೇಳು ಬೆಳಗಾಯಿತು

ಶಿವಯೋಗೆ ಶಿವರಾತ್ರಿ ಯತಿರಾಜ ಕರಜಾತ
ಗುರುಭಕ್ತ ಗುರುಶಿಷ್ಯ ಶಿಷ್ಯವರೇಣ್ಯ
ಶಿವಯೋಗ ಪ್ರತಾಪ ಶರಣಜನ ಪಾಲಕ
ಶಿವರಾತ್ರಿ ರಾಜೇಂದ್ರ ಎದ್ದೇಳು ಬೆಳಗಾಯಿತು

ಬಡತನದ ಬೇಗೆಯಲಿ ಬೇಯುತಿಹ ಮುಗ್ಧರನು
ಆಜ್ಞಾನ ಕೂಪದಲಿ ನರಳುತಿಹ ಜೀವಿಗಳ
ಬಿಡುಗಡೆಗೆ ಬದುಕೆಡೆಗೆ ಬದಲಿಸಿದ ಭವತಾರಿ
ಬಡಜನರಿಗಾಧಾರಿ ರಾಜಗುರು ರಾಜೇಂದ್ರ ಎದ್ದೇಳು ಬೆಳಗಾಯಿತು

ರಾಜರಿಗೆ ಜಯಚಾಮರಾಜರಿಗೆ ರಾಜಗುರು ತಾನಾಗಿ
ಅರಿವಿನಾಧಾರ ಮಂಗಳಗೇಯ ಪಸದನರ ಗುರುವಾಗಿ
ಶಿವಪೂಜೆ ದುರಂಧರರ ಭಕ್ತಿ ಮಣಿಹದಲ್ಲಿಟ್ಟ ಶಿವಯೋಗಿ
ಶಿವರಾತ್ರಿ ರಾಜೇಂದ್ರ ಎದ್ದೇಳು ಬೆಳಗಾಯಿತು

ಶ್ರೀ ಶಿವರಾತ್ರಿರಾಜೇಂದ್ರ ಜಯಾಷ್ಟಕ

– ಪಿ. ಬಸವಣ್ಣ

ಶಿವರಾತ್ರಿರಾಜೇಂದ್ರ ಜಯತು ಗುರುವರ್ಯ
ಭವರೋಗ ಸದ್ವೈದ್ಯ ಜಯತು ಜಗದಾರ್ಯ

ಶ್ರೀಗುರುವೆ ನಿಜದರಿವೆ ಶಾಂತಿಯಾಗರವೆ
ಭೋಗಭಾಗ್ಯವನೀವ ಭುವಿಯ ಸುರತರುವೆ
ತ್ಯಾಗತಳಹದಿಯಾಂತ ಯೋಗಮಂದಿರವೆ
ಯೋಗಿಜನಮರಕತವೆ ಜಯಜಯತು ತಮಗೆ
ಶಿವರೂಪಮಂ ಧರಿಸಿ ಭುವಿಜನರ ಪೆÇರೆವ
ಶಿವಭಕ್ತಸಂತತಿಯ ತ್ರೈಮಲವ ಕಳೆವ
ಭವರೋಗಕೌಷಧವ ಭಕ್ತರಿಗೆ ಕೊಡುವ
ಶಿವರಾತ್ರಿ ರಾಜೇಂದ್ರ ಜಯಜಯತು ತಮಗೆ

ಶೃಪಚೋಚ್ಚರಿವರೆಂಬ ಭೇದವನು ತೊರೆದ
ಉಪಚರಿಸುತೆಲ್ಲರನ್ನೊಂದಾಗಿ ತಿಳಿದ
ತಪವೆಸಗಿ ವಿಶ್ವಕಲ್ಯಾಣವನು ಬಗೆದ
ಅಪರಿಮಿತ ಗುಣಸಿಂಧು ಜಯಜಯತು ತಮಗೆ

ಕ್ಷಿತಿಯೊಳುತ್ತಮರೆನಿಸಿ ಅತಿಶಯದಿ ಮೆರೆವ
ಮತಭೇದವೆಣಿಸದಯೆ ಧರ್ಮ ಬೋಧಿಸುವ
ಮತಿಗೆಟ್ಟ ಮಾನವರ ಮಾಲಿನ್ಯ ಕಳೆವ
ಪತಿತಜನಪಾಲಕರೆ ಜಯಜಯತು ತಮಗೆ

ಬಸವರೇಣುಕರೊಳಗೆ ಭೇದ ಭಾವಿಸದ
ಎಸೆವ ಶಿವಧರ್ಮವನು ಸರ್ವಜನಕೊರೆದ
ಮಸಳಿಸದ ಪುಣ್ಯಮಯಕೀರ್ತಿಯನು ಪಡೆದ
ಅಸಮಾಕ್ಷಸಮರೂಪ ಜಯಜಯತು ತಮಗೆ

ಕಪಿಲೆಯ ತೀರದಿ

– ಡಾ. ಜಿ. ಶಂ. ಪರಮಶಿವಯ್ಯ

ಅಲ್ಲಿ ಕಪಿಲೆಯ ತೋಳಹುಲ್ಲಹಾಸಿನ ಮೇಲೆ
ಹೂವನೆರಚಿದರಾರೋ ಬೆರಗಾದೆನು.
ಮೆಲ್ಲನಡಿಯಟ್ಟಿಲ್ಲಿ ನೋಡಿದೆನು ನಾಕವನೆ
ಬೆಳ್ಳಕ್ಕಿಗಳ ಬೆಡಗು ಬೆಳದಿಂಗಳು
ಎನ್ನ ಸುಳಿವನ್ನರಿತು ಬೆಚ್ಚಿದವು ಹಕ್ಕಿಗಳು
ಬುವಿಯ ತಲ್ಲೀನತೆಯ ಉಲಿಯುವಂತೆ,
ಮುಗಿಲ ಎದೆಯೊಳಗಿಟ್ಟ ನದಿ ಲಲಾಟದ ಮೇಲೆ

ಏರಿದವು ನೀರಬೆಳ್ಗೊದಲಂತೆ
ಗಾನ ಗಂಭೀರದಲಿ ಹರಿವ ಕಪಿಲೆಯ ಕಣ್ಣ
ಮುಗುಳೆ ಅರಳಿದುದೇನೊ ಹೂವಿನಂತೆ.
ಈ ಪ್ರಶಾಂತತೆಗಿಲ್ಲಿ ನವ ಚೆಲುವ ಸೂಸುತ್ತ
ನವರಂಗವಲ್ಲಿಯನೆ ಬರೆದಿಂತಿರೆ
ಇರುಳ ತಾರಗೆಯಲ್ಲ ಹಗಲಿನೊಳಗೀ ನೆಲದ
ಚಲುವನೀಂಟುವುದೇನೊ ಈ ಪರಿಯಲಿ
ಬಾನ ಹೆಗ್ಗೊಡದಿಂದ ಮೊಸರ ಚೆಲ್ಲಿದರಾರೊ
ಆಚೆ ಮರಳಿನ ಮೇಲೆ ಮರೆಯಾದವು
ನಾ ಬಂದರೋಡುವುವು ಮತ್ತಲ್ಲಿ ಕೂಡುವುವು
ಮನುಜರನು ಕಂಡರಿವಕೇಕೆ ಬೆದರು
ಮಾನವರ ಬಗೆಯೊಂದು ಶತ್ರುಸ್ವಪ್ನವ ತಂದು
ನಾಚಿಸಿದುವೆನ್ನನ್ನೆ ಖಗಗಳೆದುರು.

ಶ್ರೀ ಕ್ಷೇತ್ರ

– ರಾಜೇಂದ್ರ ಶಿಶು

ಶ್ರೀ ಕ್ಷೇತ್ರದ ಮಣ್ಣ ಕಣದಿ
ಎಂಥ ಶಕ್ತಿ ಅಡಗಿದೆ!

ಈ ಗಾಳಿಯ ಉಸಿರುಸಿರಲಿ
ಭಕ್ತಿನಾದ ಕೇಳಿದೆ,
ಈ ನೀರಿನ ಹನಿಹನಿಯಲಿ,
ಅಮೃತತ್ತ್ವವೆ ತುಂಬಿದೆ!

ತೂಗಾಡುವ ಎಲೆ ಎಲೆಗಳ,
ಅರಳಿ ನಿಂತ ಹೂ ದಳಗಳ,
ಮಘಮಘಿಸುವ ಸೌಸವದಲಿ
ನಿನ್ನ ತತ್ತ್ವ ತುಂಬಿದೆ!

ಕಪಿಲೆಯ ತೆರೆತೆರೆಯಲಿ
ಮಂಜುಳದ ಸವಿದನಿಯಲಿ
ಶುಕಪಿಕಗಳ ಸುಸ್ವರದಲಿ
ಮಂತ್ರಶಕ್ತಿ ಅಡಗಿದೆ!