ಭಾಷಣಗಳು

/ಭಾಷಣಗಳು
ಭಾಷಣಗಳು2019-07-01T17:52:29+00:00
ಸುಭಾಷಿತಗಳು
ಲೇಖನಗಳು
ಭಾಷಣಗಳು

ಪಠ್ಯಕ್ರಮದಲ್ಲಿ ದಾರ್ಮಿಕ ಮತ್ತು ನೈತಿಕ ಶಿಕ್ಷಣದ ಅವಶ್ಯಕತೆ

(ದಿನಾಂಕ 5-2-1977 ರಂದು ಬೆಂಗಳೂರಿನಲ್ಲಿ ನಡೆದ “ಧರ್ಮಜಾಗೃತಿ” ಸಮ್ಮೇಳನಕ್ಕೆ ಶ್ರೀ ಸುತ್ತೂರು ವೀರಸಿಂಹಾಸನಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಅನುಗ್ರಹಿಸಿದ ಸಂದೇಶ ಭಾಷಣ.)

ಮಾನವನಲ್ಲಿ ಸುಪ್ತವೂ ಗುಪ್ತವೂ ಆಗಿರುವ ಪ್ರತಿಭೆಯನ್ನು ವಿಕಾಸಮಾಡಿ, ವಸ್ತುಗಳ ಬಗ್ಗೆ ನಿಜಪರಿಸ್ಥಿತಿಯ ಜ್ಞಾನವನ್ನುಂಟುಮಾಡುವ ಸಲುವಾಗಿ ಶಿಕ್ಷಣ ಕ್ರಮವೇರ್ಪಟ್ಟಿದೆ. ಇಂತಹ ಶಿಕ್ಷಣಕ್ರಮವು ಮಾನವನ ಸರ್ವಾಂಗೀಣ ಪ್ರಗತಿಗೆ ಸಾಧಕಾವಾಗಿರಬೇಕು. ಅಂದರೆ ಶಿಕ್ಷಣಕ್ರಮವು ಮಾನವನ ಪರಿಪೂರ್ಣ ವಿಕಾಸಕ್ಕೆ ಸಮರ್ಪಕವಾಗಿ ನೆರವಾಗಬೇಕು.

ಧಾರ್ಮಿಕ ಶಿಕ್ಷಣದ ಅವಶ್ಯಕತೆ:

“ಧರ್ಮ” ಎಂಬ ಪದವು ಸಂಸ್ಕೃತ “ಧೃ” ಧಾತುವಿನಿಂದ ನಿಷ್ಪನ್ನವಾಗಿದೆ. ಧರ್ಮದ ವ್ಯಾಖ್ಯಾನ್ಯವನ್ನು ವಿದ್ವಾಂಸರು ವಿಸ್ಕೃತವಾಗಿ ಮಾಡಿದ್ದಾರೆ. ವೈಶೇಷಿಕ ದರ್ಶನದಲ್ಲುಕ್ತವಾದ ಧರ್ಮದ ವ್ಯಾಖ್ಯೆ ಇಂತಿದೆ.-

“ಯತೋ ಅಭ್ಯುದಯ ನಿಶ್ರೇಯಸ ಸಿದ್ಧಿಃ ಸಧರ್ಮಃ ಇಹದಲ್ಲಿ ಅಭ್ಯುದಯ. ಪರದಲ್ಲಿ ನಿಶ್ರೇಯಸ್ಸು ಇವು ಯಾವುದರಿಂದ ಲಭ್ಯವಾಗುವುದೋ ಅದು ಧರ್ಮ. ಅಂದರೆ ಯಾವುದು ನೀತಿ ನಿಯಮಗಳಿಗೆ ಅನುಗುಣವಾಗಿ, ಇಹದಲ್ಲಿ ಮಾನವನ ಏಳಿಗೆಗೆ ಸಾಧಕವಾಗಿ, ಪರದಲ್ಲಿ ಅವನಿಗೆ ಕಲ್ಯಾಣವನ್ನುಂಟುಮಾಡುವುದೋ ಅದೇ ಧರ್ಮ. ಇಂತಹ ಧರ್ಮವನ್ನು ಶಿಕ್ಷಣ ಕ್ರಮದಲ್ಲಿ ಕಡೆಗಣಿಸುವುದು ಉಚಿತವೇ? ಸಾಧುವೇ? ವಿವೇಚಿಸಿ.

“ಧರ್ಮೋ ರಕ್ಷತಿ ರಕ್ಷಿತಃ” ಧರ್ಮವು ರಕ್ಷಿಸಿದವರನ್ನು ಅಂದರೆ ಧರ್ಮ ಮಾರ್ಗದಲ್ಲಿ ನಡೆಯುವವರನ್ನು ರಕ್ಷಿಸುತ್ತದೆ. ವ್ಯಕ್ತಿ ಅವರವರ ಅಭಿರುಚಿಗೆ ಅನುಗುಣವಾಗಿ ಯಾವ ಧರ್ಮವನ್ನು ಬೇಕಾದರೂ ಸ್ವೀಕರಿಸಬಹುದು. ಆತನು ಸ್ವೀಕರಿಸಿದ ಧರ್ಮದಲ್ಲಿ ನಿಷ್ಠಯಿಂದ ನಡೆದದ್ದೇ ಆದರೆ ಆ ವ್ಯಕ್ತಿಯ ಆತ್ಮಕಲ್ಯಾಣವಾಗುವುದಷ್ಟೇ ಅಲ್ಲದೆ ಮಾನವ ಕಲ್ಯಾಣ ಆಗುವುದು. ಪ್ರತಿಯೊಂದು ಧರ್ಮದಲ್ಲಿಯೂ ನೀತಿಗೆ ಅಗ್ರಸ್ಥಾನ ಕೊಟಿರುವುದನ್ನು ಗಮನಿಸಬಹುದು. “ಆತ್ಮವತ್ ಸರ್ವ ಭೂತಾನಿ ಯಃ ಪಶ್ಯರೆ ಸ ಪಂಡಿತಃ” ಎಂಬ ಭಾಗವನ್ನು “ತನ್ನಂತೆ ಪರರ ಬಗೆದೆಡೆ ಕೈಲಾಸ ಬಿನ್ನಾಣವಕ್ಕು ಸರ್ವಜ್ಞ” ಎಂಬ ಸರ್ವಜ್ಞನ ನುಡಿಯಲ್ಲಿಯೂ “ನಿನ್ನ ನೆರೆಹೊರೆಯವರನ್ನು ನಿನ್ನಂತೆಯೇ ಪ್ರೀತಿಸು” ಎಂಬ ಮಹಾತ್ಮ ಏಸುಕ್ರಿಸ್ತನ ಮಾತಿನಲ್ಲಿಯೂ ಕಾಣಬಹುದಾಗಿದೆ.

ಏಸುಕ್ರಿಸ್ತ, ಬುದ್ಧ, ಮಹಾವೀರ, ಮಹಮದ್ ಪೈಗಂಬರ್, ಆಚಾರ್ಯಶಂಕರ, ರಾಮಾನುಜ, ಬಸವ, ಮಧ್ವ, ಚೈತನ್ಯ, ಗುರುನಾನಕ್ ಮೊದಲಾದ ಮಹನೀಯರು ಧರ್ಮದ ಶ್ರೇಷ್ಠ ತತ್ವಗಳನ್ನು ಅರುಹಿರುವವರು. ಈ ಎಲ್ಲ ತತ್ವಗಳ ಗುರಿಯೂ ಮನವನ ಕಲ್ಯಾಣದ ಸಲುವಾಗಿದೆಯಂಬುದನ್ನು ಮರೆಯಲಾಗದು. ಕೆಲವೊಮ್ಮೆ ವಿವಿಧ ಮತ ಪಂಥಗಳ ವಿಧಿ ವಿಧಾನಗಳ ಆಚರಣೆಗಳಲ್ಲಿ ಭಿನ್ನತೆ ತೋರಿ ಬಂದರೂ ಮೂಲಭೂತವಾದ ನೈತಿಕ ಅಂಶಗಳಲ್ಲಿ ಏಕತೆ ಇರುವುದನ್ನು ಗಮನಿಸಬಹುದಾಗಿದೆ.

ಸಾಹಿತ್ಯ, ಕಲೆ, ವಿಜ್ಞಾನ, ವಾಣಿಜ್ಯ ಮೊದಲಾದ ವಿಭಾಗಗಳಲ್ಲಿ ಮನುಷ್ಯ ಎಷ್ಟೇ ಪಾಂಡಿತ್ಯವನ್ನು ಪಡೆದು ಅವುಗಳ ನೆರವಿನಿಂದ ಅಪರಿಮಿತವಾದ ಭೌತಿಕ ಸಂಪತ್ತನ್ನು ಗಳಿಸಿದಾಗ್ಯೂ, ಸಂತೃಪ್ತಿ, ಸಮಾಧಾನ, ನಿಜಸುಖಗಳನ್ನು ಪಡೆಯಲಾರ. ವಿಜ್ಞಾನದ ಪ್ರಗತಿಯಿಂದ ಅಮೆರಿಕಾ ಮೊದಲಾದ ದೇಶಗಳ ಜನರು ಅಪಾರ ಐಶ್ವರ್ಯ ಗಳಿಸಿ ಸಮೃದ್ಧ ಭೋಗಜೀವನವನ್ನು ನಡೆಸುತ್ತಿರುವರಾದರೂ ನಿಜಸುಖ, ಶಾಂತಿ, ಆನಂದ ಇವುಗಳಿಂದಾಗಿ ಭಾರತದ ಶ್ರೇಷ್ಠ ಆಧ್ಯಾತ್ಮಿಕ ಮೌಲ್ಯಗಳತ್ತ ತಮ್ಮ ಗಮನವನ್ನು ಹರಿಸುತ್ತಿರುವುದು ಅವರ ಅತೃಪ್ತ ಜೀವನಕ್ಕೆ ಸಾಕ್ಷಿ. ಇದರಿಂದ ಶಿಕ್ಷಣ ಕ್ರಮವು ಕೇವಲ ಆಯಾ ವಿಷಯಕ್ಕೆ ಸಂಬಂಧಿಸಿದ ಜ್ಞಾನಾರ್ಜನೆಯನ್ನು ಮಾತ್ರ ತಿಳಿಸಿಕೊಡುವುದರ ಜೊತೆಗೆ ಧಾರ್ಮಿಕ ಜ್ಞಾನವನ್ನು ಅವಶ್ಯವಾಗಿ ಮಾಡಿಕೊಡಬೇಕೆಂಬುದು ಖಚಿತವಾಗಿ ತಿಳಿದುಬರುವುದು.

ಖ್ಯಾತ ವಿಜ್ಞಾನಿ ಐನ್‍ಸ್ಟಿನ್ನನು “ಧರ್ಮರಹಿತವಾದ ವಿಜ್ಞಾನ ಕುರುಡು, ವಿಜ್ಞಾನರಹಿತವಾದ ಧರ್ಮ ಕುಂಟು” ಎಂದು ಹೇಳಿರುವುದು ಮನನೀಯ. “ವಿಜ್ಞಾನ ಮತ್ತು ಧರ್ಮ” ಇವು ಪರಸ್ಪರ ಪೂರಕಗಳು. ಅತ್ಯಂತ ಮುಂದುವರಿದ ರಾಷ್ಟ್ರಗಳ ಶಿಕ್ಷಣಕ್ರಮವನ್ನು ಚೆನ್ನಾಗಿ ವಿವೇಚಿಸಿ ಅವುಗಳಿಂದ ಒದಗುವ ಫಲಗಳನ್ನು ಗಮನಕ್ಕೆ ತೆಗೆದುಕೊಂಡು ಅಲ್ಲಿ ಸಹಜವಾಗಿರುವ ನ್ಯೂನತೆಗಳನ್ನು ನಿವಾರಿಸಿ ನಮ್ಮ ದೇಶದ ಸಂಸ್ಕೃತಿಯ ಅಡಿಪಾಯದ ಮೇಲೆ ಶಿಕ್ಷಣಕ್ರಮವನ್ನು ಸುಸಂಬದ್ಧವಾಗಿ ಸಂಯೋಜಿಸಿದಾಗ ಮಾತ್ರ ಪರಿಣಾಮಕಾರಿಯಾದ ಫಲ ಸಾಧ್ಯ. ಆದುದರಿಂದ ಪ್ರಾಥಮಿಕ ಶಿಕ್ಷಣದಿಂದ ಮೊದಲುಗೊಂಡು ಸ್ನಾತಕೋತ್ತರ ಶಿಕ್ಷಣದವರೆಗೆ ಮಾನವ ಧರ್ಮದ ಮೂಲಭೂತ ತತ್ವಗಳನ್ನು ಆಧುನಿಕ ಶಿಕ್ಷಣಕ್ರಮದಲ್ಲಿ ಅವಶ್ಯವಾಗಿ ಸಂಯೋಜಿಸಬೇಕು.”

ಇದರ ಜೊತೆಗೆ ವ್ಯಕ್ತಿಯ, ಸಮಾಜದ, ದೇಶದ ಹಿತದೃಷ್ಟಿಯಿಂದ ನೈತಿಕ ಶಿಕ್ಷಣವೂ ಅತ್ಯವಶ್ಯ. ಸಭ್ಯ, ಸುಂದರ, ಸುಸಂಸ್ಕೃತ ರಾಷ್ಟ್ರವನ್ನು ಕಟ್ಟ್ಟಬೇಕಾದರೆ, ಅದಕ್ಕೆ ನೀತಿಯೇ ಭದ್ರವಾದ ಅಡಿಗಲ್ಲು ಎಂಬುದನ್ನು ನಾವು ಮರೆಯಲಾಗದು.

ಜೀವನದಲ್ಲಿ “ನಿಷೇಧಕ ನೀತಿ”ಯನ್ನು ದಮನಮಾಡಿ “ವಿಧಾಯಕ ನೀತಿ” ಯನ್ನು ಬೆಳೆಸಬೇಕು. ಅಣ್ಣನವರ “ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯಬೇಡಾ, ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲ ಸಂಗಮದೇವನೊಲಿಸುವ ಪರಿ” – ಅಂತರಂಗ ಬಹಿರಂಗಗಳ ಶುದ್ಧಿ ಹೊಂದಲು ಸರ್ವರೂ ಪ್ರಯತ್ನಿಸಬೇಕು. “ಕೊಲ್ಲದಿರ್ಪುದೇ ಧರ್ಮ, ಅಧರ್ಮದಿಂದ ಬಂದುದ ಒಲ್ಲದಿಪ್ಪುದೇ ನೇಮ, ಆಶೆಯಿಲ್ಲದಿಪ್ಪುದೇ ತಪ, ರೋಷವಿಲ್ಲದಿಪ್ಪುದೇ ಜಪ” ಮುಂತಾದ ಮಾತುಗಳು ಎಲ್ಲ ಮಾನವರಿಗೂ ಅನ್ವಯವಾಗುತ್ತದೆ. ಈ ರೀತಿಯಾಗಿ ಮಾನವನ ದುಷ್ಟವೃತ್ತಿಯನ್ನು ದೂರಮಾಡಲು ನೈತಿಕವಿದ್ಯೆ, ಶಿಕ್ಷಣ ಅತ್ಯಗತ್ಯ”

ಮಾನವನು ಸತ್ಯ-ಅಹಿಂಸೆ-ಅಸ್ತೇಯ-ಬ್ರಹ್ಮಚರ್ಯ ಅಪರಿಗ್ರಹ ಮುಂತಾದವುಗಳನ್ನು ಅಳವಡಿಸಿಕೊಂಡು ಜೀವನವನ್ನು ಸಾರ್ಥಕವನ್ನಾಗಿ ಮಾಡಿಕೊಳ್ಳಬೇಕು.

“ಸತ್ಯಂವದ, ಧರ್ಮಂಚ”

“ಸತ್ಯಾನ್ನಾಸ್ತಿ ಪರೋಧರ್ಮಃ”

“ಸತ್ಯವೆಂಬುದೇ ಹರನು; ಹರನೆಂಬುದೇ ಸತ್ಯ”

ಈ ಉಕ್ತಿಗಳು ಮಾನವನು ಸತ್ಯವಂತನ್ನಾಗಿರಬೇಕೆಂಬುದನ್ನು ಒತ್ತಿ ಒತ್ತಿ ಹೇಳುತ್ತವೆ. ರಾಷ್ಟ್ರಪಿತರಾದ ಮಹಾತ್ಮ ಗಾಂಧೀಜಿಯವರು “ಸತ್ಯವೇ ದೇವರು” ಎಂದು ಹೇಳಿರುವುದನ್ನು ಸ್ಮರಿಸಬಹುದು.

“ಅಹಿಂಸೆ” ನಮ್ಮ ಪಠ್ಯಕ್ರಮದಲ್ಲಿ ಅಳವಡಿಸಬೇಕಾಗಿರುವ ಮತ್ತೊಂದು ಅವಶ್ಯವಾದ ನೀತಿ. ಗಾಂಧೀಜಿಯವರು ಅಹಿಂಸೆಯ ಅವಶ್ಯಕತೆ ಮತ್ತು ಅದರ ಹಿರಿಮೆಗಳನ್ನು ಬಹಳ ಸುಂದರವಾಗಿ ಪ್ರತಿಪಾದಿಸಿರುವರು. ಸತ್ಯ-ತ್ಯಾಗಗಳ ಮೂರ್ತಿಯಾದ ಗಾಂಧೀಜಿಯವರು ಅಹಿಂಸೆಯ ಅಸ್ತ್ರದಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರವನ್ನು ತಂದುಕೊಟ್ಟಿದುದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

ವಿದ್ಯಾರ್ಜನೆ ಮುಗಿಸಿ ಗುರುಕುಲದಿಂದ ತೆರಳಿರುವ ಸ್ನಾತಕನಿಗೆ ತೈತ್ತರೀಯೊಪನಿಷತ್ತಿನಲ್ಲಿ “ಸತ್ಯವನ್ನು ನುಡಿ, ಧರ್ಮದಿಂದ ನಡೇ; ನಿಂದನೀಯವಾದ ಕೆಲಸವನ್ನು ಮಾಡಬೇಡ, ಧರ್ಮಸಮ್ಮತವಾದ ಕಾರ್ಯವನ್ನು ಮಾಡು: ಇತ್ಯಾದಿಯಾಗಿ ಗುರುವು ಅದೇಶ ನೀಡುವನು. ಗುರುವಿನ ಈ ಅನುಶಾಸನ ಇಂದಿಗೂ ಅನುಕರಣಿಯವಾಗಿದೆ. ಮೇಲ್ಕಂಡ ನೀತಿಗಳು ಇದೇ ಮಾನವ ಕುಲದ ಕಲ್ಯಾಣಕ್ಕೆ ಸಾಧಕವಾಗಿವೆ. ಇಂಥ ಶಿಕ್ಷಣ ಎಲ್ಲಾ ಮಾನವರಿಗೂ ಬೇಕಲ್ಲವೆ?

ಆಧುನಿಕ ಶಿಕ್ಷಣ ಕ್ರಮದಲ್ಲಿ ಧಾರ್ಮಿಕ ಮತ್ತು ನೈತಿಕ ಶಿಕ್ಷಣವನ್ನು ಸಂಯೋಜಿಸಿದಾಗ ಮಾತ್ರ ಮಾನವರು ಭೌತಿಕ ಮತ್ತು ಆಧ್ಯಾತ್ಮಿಕ ಸಂಪತ್ತನ್ನು ಹೊಂದಿ ಸರ್ವತೋಮುಖ ಪ್ರಗತಿ ಪಡೆದು ಸಂತೃಪ್ತಿ, ಸಮಾಧಾನ ಮತ್ತು ಆನಂದವನ್ನು ಹೊಂದಬಲ್ಲರು. ಆದುದರಿಂದ ಈಗಿನ ಪಠ್ಯಕ್ರಮದಲ್ಲಿ ಆಧ್ಯಾತ್ಮಿಕ ಮತ್ತು ನೈತಿಕ ಶಿಕ್ಷಣವನ್ನು ಅವಶ್ಯ ಸೇರಿಸಿ ಪರಿಪೂರ್ಣವಾದ ಶಿಕ್ಷಣ ಜನರಿಗೆ ಲಭಿಸುವಂತೆ ಮಾಡಬೇಕೆಂದು ಸರ್ಕಾರಕ್ಕೆ ಒತ್ತಾಯ ಪೂರ್ವಕವಾಗಿ ಸೂಚಿಸುತ್ತೇನೆ. ಶಿಕ್ಷಣವೇತ್ತರು ಈ ಬಗೆಗೆ ಗಮನ ಹರಿಸಿ ಈ ಕೊರತೆಯನ್ನು ಕೂಡಲೇ ನಿವಾರಿಸುತ್ತಾರೆಂದು ನಂಬಿದ್ದೇನೆ. ಈ ಸಮ್ಮೇಳನವು ನಮ್ಮ ಅಭಿಪ್ರಾಯಕ್ಕೆ ಪೂರ್ಣವಾಗಿ ಬೆಂಬಲಕೊಟ್ಟು ಇದನ್ನು ನಿರ್ಣಯರೂಪದಲ್ಲಿ ಸ್ವೀಕರಿಸಬೇಕೆಂದು ಆಶಿಸುತ್ತೇನೆ.