ಜೆಎಸ್‍ಎಸ್ ವಿಶ್ವವಿದ್ಯಾನಿಲಯ, ಮೈಸೂರು

/ಜೆಎಸ್‍ಎಸ್ ವಿಶ್ವವಿದ್ಯಾನಿಲಯ, ಮೈಸೂರು
ಜೆಎಸ್‍ಎಸ್ ವಿಶ್ವವಿದ್ಯಾನಿಲಯ, ಮೈಸೂರು2016-12-22T14:54:24+00:00

ಜೆಎಸ್‍ಎಸ್ ಮಹಾವಿದ್ಯಾಪೀಠವು ಕಳೆದ 6 ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯ ದ್ಯೋತಕವಾಗಿ ವೈದ್ಯಕೀಯ ವಿಶ್ವವಿದ್ಯಾನಿಲಯ ಪ್ರಾರಂಭಿಸಲಾಯಿತು. 2008 ನೇ ಸಾಲಿನಲ್ಲಿ ನಂ.ಎಂವೈಎಸ್ 861/2007-08 ದಿನಾಂಕ 08-05-2008 ರಂದು ಜೆಎಸ್‍ಎಸ್ ವಿಶ್ವವಿದ್ಯಾನಿಲಯ ಎಂಬ ಸಂಘವನ್ನು ನೋಂದಾಯಿಸಲಾಯಿತು. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಯಜಿಸಿ ನಿಯಮ 1956ರ 3ನೇ ಸೆಕ್ಷನ್ ಅಡಿ, 2008 ಮೇ ನಲ್ಲಿ ಜೆಎಸ್‍ಎಸ್ ವಿಶ್ವವಿದ್ಯಾನಿಲಯಕ್ಕೆ “Deemed to be University” ಎಂದು ಮಂಜೂರಾತಿ ದೊರೆಯಿತು. ವಿಶ್ವವಿದ್ಯಾನಿಲಯದ ಉದ್ದೇಶಿತ ಗುರಿ ವೈದ್ಯಕೀಯ ಶಿಕ್ಷಣ ನೀಡುವುದು ಮತ್ತು ಉತ್ತಮ ಗುಣಮಟ್ಟದ ವೈದ್ಯಕೀಯ ಸೌಲಭ್ಯ ಒದಗಿಸುವುದು. ಸಂಶೋಧನಾ ಚಟುವಟಿಕೆಗಳನ್ನು ಮಾಡುವುದು, ಮೌಲ್ಯಯುತ ಶಿಕ್ಷಣ ನೀಡುವುದು ಮತ್ತು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಜ್ಞಾನಾರ್ಜನೆ ಮಾಡಿಸುವುದು.

ಈ ಕೆಳಕಂಡ 4 ವೈದ್ಯಕೀಯ ಶಿಕ್ಷಣ ಸಂಸ್ಥೆಗಳನ್ನು ವಿಶ್ವವಿದ್ಯಾನಿಲಯದ ಕಾರ್ಯವ್ಯಾಪ್ತಿಗೆ ಒಳಪಡಿಸಿದೆ.

  • ಜೆಎಸ್‍ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು.
  • ಜೆಎಸ್‍ಎಸ್ ದಂತವೈದ್ಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಮೈಸೂರು.
  • ಜೆಎಸ್‍ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯ, ಮೈಸೂರು
  • ಜೆಎಸ್‍ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯ, ಊಟಿ

ಈ ವಿಶ್ವವಿದ್ಯಾನಿಲಯದ ವ್ಯಾಪ್ತಿಯ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಎಂಬಿಬಿಎಸ್, ಬಿಡಿಎಸ್, ಬಿ.ಫಾರ್ಮ ಸೇರಿದಂತೆ 6 ಪದವಿ ಕೋರ್ಸ್‍ಗಳು ಹಾಗೂ ವಿವಿಧ ವಿಷಯಗಳ 48 ಸ್ನಾತಕೋತ್ತರ ಪದವಿಗಳಿಗೆ ಶಿಕ್ಷಣ ನೀಡುತ್ತಿವೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ವಿಷಯಗಳಲ್ಲಿ ಜ್ಞಾನಾರ್ಜನೆ/ಸಂಶೋಧನೆಗೆ ತೊಡಗಿದ್ದ 15 ಸಂಶೋಧಕರಿಗೆ ಪಿ.ಹೆಚ್.ಡಿ. ಪದವಿ ಪ್ರಧಾನ ಮಾಡಲಾಗಿದೆ. ಈ ಎಲ್ಲಾ ವೈದ್ಯಕೀಯ ಸಂಸ್ಥೆಗಳು ಎಲ್ಲಾ ಸವಲತ್ತನ್ನು ಒಳಗೊಂಡ ಸ್ವಂತ ಕಟ್ಟಡಗಳನ್ನು ಹೊಂದಿವೆ. 597 ಶಿಕ್ಷಕರನ್ನೊಳಗೊಂಡಿರುವ ಈ ಸಂಸ್ಥೆಗಳಲ್ಲಿ ವರದಿ ಸಾಲಿನಲ್ಲಿ 2,800 ವಿದ್ಯಾರ್ಥಿಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಆಧ್ಯಯನದಲ್ಲಿ ತೊಡಗಿದ್ದು 75 ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪದವಿಧರರು ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.

ಅವಶ್ಯಕತೆಗೆ ಅನುಗುಣವಾಗಿ ಸುಧಾರಿತ ವೈದ್ಯಕೀಯ ನೆರವನ್ನು ಒದಗಿಸುವ ನಿಮಿತ್ತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ಮಾನವ ಸಂಪನ್ಮೂಲ ತರಬೇತಿ ನೀಡುವ ಸಲುವಾಗಿ 2011-12 ನೇ ಸಾಲಿನಲ್ಲಿ 10 ಹೊಸ ಕೋರ್ಸ್‍ಗಳನ್ನು ಪ್ರಾರಂಭಿಸಲಾಗಿದೆ.