ಉಚಿತ ಪ್ರಸಾದನಿಲಯಗಳು2016-12-22T13:23:41+00:00

JSS_rsw_18

ಉಚಿತ ಪ್ರಸಾದನಿಲಯಗಳು

ಸುಮಾರು ಐದಾರು ದಶಕಗಳ ಹಿಂದೆ ಉನ್ನತ ಶಿಕ್ಷಣ ಸಂಸ್ಥೆಗಳು ನಗರ ಪ್ರದೇಶಗಳಲ್ಲಿ ಸ್ಥಾಪನೆಯಾಗುತ್ತಿದ್ದವು. ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಪಟ್ಟಣ ಪ್ರದೇಶಗಳಿಗೆ ಬರಲೇಬೇಕಾಗಿತ್ತು. ಇದನ್ನು ಮನಗಂಡ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರು ಏಳು ದಶಕಗಳ ಹಿಂದೆಯೆ ಮೈಸೂರಿನಲ್ಲಿ ಒಂದು ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿ ಗ್ರಾಮಾಂತರ ಪ್ರದೇಶದ ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಶನ-ವಸತಿಗಳನ್ನು ಕಲ್ಪಿಸಿದರು. ಅಂದು ವಾಣಿ ವಿಲಾಸ ರಸ್ತೆಯಲ್ಲಿ ಸ್ಥಾಪಿತವಾದ ವಿದ್ಯಾರ್ಥಿನಿಲಯವು “ಸುತ್ತೂರು ಹಾಸ್ಟೆಲ್” (ಮೇನ್ ಬಿಲ್ಡಿಂಗ್) ಎಂದೇ ವಿದ್ಯಾರ್ಥಿ ಸಮುದಾಯದಲ್ಲಿ ಪ್ರಸಿದ್ಧವಾಗಿದೆ.

ಪೂಜ್ಯ ಶ್ರೀಗಳವರು ಮಹಾವಿದ್ಯಾಪೀಠವನ್ನು ಸ್ಥಾಪಿಸುವ ಮೊದಲೇ ಆರ್ಥಿಕವಾಗಿ ಹಿಂದುಳಿದ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಥಳಗಳಲ್ಲಿ ವಿದ್ಯಾರ್ಥಿ ನಿಲಯಗಳನ್ನು ಮತ್ತು ಅನಾಥಾಲಯಗಳನ್ನು ಪ್ರಾರಂಭಿಸಿ ಉಚಿತ ಊಟ-ವಸತಿಗಳ ಸೌಲಭ್ಯವನ್ನು ಕಲ್ಪಿಸಿದ್ದರು.

ಅನಾಥಾಲಯಗಳು

ಮಹಾವಿದ್ಯಾಪೀಠವು 9 ಅನಾಥಾಲಯಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಒಟ್ಟು 482 ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇವುಗಳ ಪೈಕಿ 7 ಅನಾಥಾಲಯಗಳು ಮಾತ್ರ ಅನುದಾನಿತ ಸಂಸ್ಥೆಗಳಾಗಿದ್ದು, ಉಳಿದ 2ನ್ನು ಮಹಾವಿದ್ಯಾಪೀಠದ ನೆರವಿನಿಂದ ನಡೆಸಿಕೊಂಡು ಬರಲಾಗುತ್ತಿದೆ.

ಉಚಿತ ವಿದ್ಯಾರ್ಥಿನಿಲಯಗಳು

05 ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಒಟ್ಟು 497 ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇವುಗಳ ಪೈಕಿ 02 ವಿದ್ಯಾರ್ಥಿನಿಲಯಗಳು ಮಾತ್ರ ಅನುದಾನಿತ ಸಂಸ್ಥೆಗಳಾಗಿದ್ದು, ಉಳಿದ 03ನ್ನು ಮಹಾವಿದ್ಯಾಪೀಠದ ನೆರವಿನಿಂದ ನಡೆಸಿಕೊಂಡು ಬರಲಾಗುತ್ತಿದೆ.

ನಿರ್ಗತಿಕ ಮಕ್ಕಳ ಕುಟೀರಗಳು

ಸುತ್ತೂರು ಮತ್ತು ಹುಲ್ಲಹಳ್ಳಿಗಳಲ್ಲಿ ನಿರ್ಗತಿಕ ಮಕ್ಕಳ ಕುಟೀರಗಳನ್ನು ನಡೆಸಲಾಗುತ್ತಿದೆ. ಇವು ಅನುದಾನಿತ ಸಂಸ್ಥೆಗಳಾಗಿವೆ. ಇವುಗಳಲ್ಲಿ ಒಟ್ಟು 50 ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿದ್ದು, ಪ್ರತಿ ಕುಟೀರದಲ್ಲಿ 25 ನಿರ್ಗತಿಕ ಮಕ್ಕಳಿದ್ದಾರೆ.

ಉಚಿತ ಮಹಿಳಾ ವಸತಿ ನಿಲಯ

ಮೈಸೂರಿನಲ್ಲಿ ವಿಕಲಚೇತನ ಉದ್ಯೋಗಸ್ಥ ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯವನ್ನು ನಡೆಸುತ್ತಿದೆ. ಇದು ಅನುದಾನಿತ ಸಂಸ್ಥೆಯಾಗಿದ್ದು, ಇಲ್ಲಿ ಒಟ್ಟು 26 ಮಹಿಳೆ/ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಉಚಿತ ಶಿಕ್ಷಣ ಯೋಜನೆ

ಸುತ್ತೂರಿನಲ್ಲಿ ಉಚಿತ ಶಿಕ್ಷಣ ಯೋಜನೆಯನ್ನು ಅನುಷ್ಠಾನಗೊಳಿಸಿ, ಜಾತಿಮತ ಭೇದವಿಲ್ಲದೆ, ಬಡಮಕ್ಕಳನ್ನು ಗುರುತಿಸಿ ದಾಖಲಿಸಿಕೊಂಡು ಅವರಿಗೆ ಉಚಿತ ಊಟ, ವಸತಿ, ಸಮವಸ್ತ್ರ, ಪುಸ್ತಕ ಮತ್ತಿತರ ಸೌಲಭ್ಯಗಳನ್ನು ನೀಡಿ ಅವರ ವಿದ್ಯಾಭ್ಯಾಸ ಮುಂದುವರಿಸಲು ಅನುವು ಮಾಡಲಾಗಿದೆ. ಈ ಉಚಿತ ಶಿಕ್ಷಣ ಯೋಜನೆಯಡಿ ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೆಕ ವಿದ್ಯಾರ್ಥಿನಿಲಯಗಳನ್ನು ಸ್ಥಾಪಿಸಿ 2972 ಮಕ್ಕಳಿಗೆ ವಸತಿ, ಸಮವಸ್ತ್ರ, ಪುಸ್ತಕ, ಊಟ ಮತ್ತು ವೈದ್ಯಕೀಯ ಸೌಲಭ್ಯವನ್ನು ಉಚಿತವಾಗಿ ಕಲ್ಪಿಸಲಾಗಿದೆ.
ಮಹಾವಿದ್ಯಾಪೀಠವು ಒಟ್ಟಾರೆ 19 ಅನಾಥಾಲಯಗಳು ಮತ್ತು ಉಚಿತ ವಿದ್ಯಾರ್ಥಿನಿಲಯಗಳನ್ನು ನಡೆಸುತ್ತಿದ್ದು, ಅವುಗಳಲ್ಲಿ ಒಟ್ಟು 4,027 ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲಾಗಿದೆ. ಇವುಗಳ ವಾರ್ಷಿಕ ವೆಚ್ಚ `.252.36 ಲಕ್ಷಗಳಾಗಿದೆ.

ವಿದ್ಯಾಸಂಸ್ಥೆಗಳಿಗೆ ಹೊಂದಿಕೊಂಡಂತೆ ಸ್ಥಾಪಿಸಿರುವ ವಿದ್ಯಾರ್ಥಿನಿಲಯಗಳು

ಮಹಾವಿದ್ಯಾಪೀಠವು ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿಯೂ ಆಯಾ ಸಂಸ್ಥೆಗಳಿಗೆ ಹೊಂದಿಕೊಂಡಂತೆ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಊಟ ವಸತಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ. ಈ ಸಾಲಿನಲ್ಲಿ ಒಟ್ಟು 35 ವಿದ್ಯಾರ್ಥಿನಿಲಯಗಳನ್ನು ನಡೆಸಲಾಗುತ್ತಿದೆ. ಇವುಗಳಲ್ಲಿ ಒಟ್ಟು 6008 ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ ಊಟ, ವಸತಿ ಕಲ್ಪಿಸಲಾಗಿದೆ. ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲಿಯೂ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಗಮನಾರ್ಹ. ವಿದ್ಯಾರ್ಥಿನಿಲಯಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ವಸತಿ ಸೌಕರ್ಯ ಮತ್ತಿತರ ಅನುಕೂಲತೆಗಳನ್ನು ಹೆಚ್ಚುವರಿಯಾಗಿ ಕಲ್ಪಿಸಲಾಗುತ್ತಿದೆ.